ಸಾರಾಂಶ
ನಟೇಶ್ ಪೂಜಾರಿ ತಮ್ಮ ಸಂಪಾದನೆಯ 1 ಲಕ್ಷ ರು. ಹಣವನ್ನು ಮೀಸಲಿರಿಸಿ ಮನೆಯ ಛಾವಣಿಗೆ ಕಬ್ಬಿಣದ ಪಕ್ಕಾಸು – ರೀಪುಗಳನ್ನು ಅಳವಡಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ಕಡಿತಕ್ಕೊಳಗಾಗಿದ್ದ ಮನೆಯ ವಿದ್ಯುತ್ ಸಂಪರ್ಕವನ್ನು ಪುನರ್ ಜೋಡಿಸಿ ಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಉಪ್ಪಿನಂಗಡಿಯ ನಿವಾಸಿ ನಟೇಶ್ ಪೂಜಾರಿ ಅವರು, ಬಡ ಕುಟುಂಬದ ಕುಸಿತದ ಹಂತದಲ್ಲಿದ್ದ ಮನೆಗೆ ಸುದೃಢವಾದ ಛಾವಣೆಯನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಬೀತಲಪ್ಪು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಎರಡು ಪುಟ್ಟ ಮಕ್ಕಳು ಹಾಗೂ ಪತಿಯೊಂದಿಗೆ ವಾಸಿಸುತ್ತಿದ್ದ ಉಷಾ ಅವರದ್ದು ತೀರಾ ಬಡತನದ ಬದುಕು. ಕೌಟುಂಬಿಕ ಅನಿವಾರ್ಯತೆಯ ನಡುವೆ ಮನೆಯ ಎಲ್ಲ ಜವಾಬ್ದಾರಿಯನ್ನು ಉಷಾ ಅವರೇ ಹೊತ್ತು ಕೂಲಿ ಮಾಡಿಕೊಂಡು ತನ್ನ ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದರು.
ಸುಮಾರು ೨೦ ವರ್ಷಗಳ ಹಿಂದೆ ನಿರ್ಮಿಸಿದ ಇವರ ಮನೆಯ ಬಿದಿರಿನ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಬೀಳುವ ಸ್ಥಿತಿಗೆ ಸಿಲುಕಿತ್ತು. ಈ ಮನೆಯ ಸಂಕಷ್ಟವನ್ನು ಸ್ಥಳೀಯ ಪತ್ರಕರ್ತರ ಮೂಲಕ ತಿಳಿದುಕೊಂಡ ನಟೇಶ್ ಪೂಜಾರಿ ತಮ್ಮ ಸಂಪಾದನೆಯ 1 ಲಕ್ಷ ರು. ಹಣವನ್ನು ಮೀಸಲಿರಿಸಿ ಮನೆಯ ಛಾವಣಿಗೆ ಕಬ್ಬಿಣದ ಪಕ್ಕಾಸು – ರೀಪುಗಳನ್ನು ಅಳವಡಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ಕಡಿತಕ್ಕೊಳಗಾಗಿದ್ದ ಮನೆಯ ವಿದ್ಯುತ್ ಸಂಪರ್ಕವನ್ನು ಪುನರ್ ಜೋಡಿಸಿ ಕೊಟ್ಟಿದ್ದಾರೆ.