ಗರ್ಭಧರಿಸದೆ ಹಾಲು ಕೊಡುತ್ತಿರುವ ಇಲಾತಿ ಕರು..!

| Published : Jul 06 2025, 01:48 AM IST

ಗರ್ಭಧರಿಸದೆ ಹಾಲು ಕೊಡುತ್ತಿರುವ ಇಲಾತಿ ಕರು..!
Share this Article
  • FB
  • TW
  • Linkdin
  • Email

ಸಾರಾಂಶ

ಗರ್ಭಧರಿಸದೆ, ಕರುವನ್ನು ಹಾಕದೆ 19 ತಿಂಗಳ ಜೆರ್ಸಿ ಮಿಶ್ರಿತ ಆಲ್ ಬ್ಲಾಕ್ ತಳಿಯ ಇಲಾತಿ ಹಸುವೊಂದು ಕಳೆದ 2 ತಿಂಗಳಿಂದ ಹಾಲು ಕೊಡುವ ಮೂಲಕ ತಾಲೂಕಿನ ತಿಮ್ಮನಹೊಸೂರು ಗ್ರಾಮದಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ರೈತ ಕೆ.ಪುಟ್ಟಸ್ವಾಮಿ ಅವರಿಗೆ ಸೇರಿದ ಕರು ಕಳೆದ ಎರಡು ತಿಂಗಳಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ತಲಾ 2 ಲೀಟರ್‌ನಂತೆ 4 ಲೀಟರ್ ಹಾಲು ಕೊಡುತ್ತಿದೆ.

ಎಚ್.ಕೆ.ಅಶ್ವಥ್, ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಗರ್ಭಧರಿಸದೆ, ಕರುವನ್ನು ಹಾಕದೆ 19 ತಿಂಗಳ ಜೆರ್ಸಿ ಮಿಶ್ರಿತ ಆಲ್ ಬ್ಲಾಕ್ ತಳಿಯ ಇಲಾತಿ ಹಸುವೊಂದು ಕಳೆದ 2 ತಿಂಗಳಿಂದ ಹಾಲು ಕೊಡುವ ಮೂಲಕ ತಾಲೂಕಿನ ತಿಮ್ಮನಹೊಸೂರು ಗ್ರಾಮದಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮದ ರೈತ ಕೆ.ಪುಟ್ಟಸ್ವಾಮಿ ಅವರಿಗೆ ಸೇರಿದ ಕರು ಕಳೆದ ಎರಡು ತಿಂಗಳಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ತಲಾ 2 ಲೀಟರ್‌ನಂತೆ 4 ಲೀಟರ್ ಹಾಲು ಕೊಡುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಗೆ ಸೇರುವ ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿ 2ನೇ ವೃತ್ತದ ಮಂಗಲ ಗ್ರಾಪಂ ವ್ಯಾಪ್ತಿಗೆ ಸೇರುವ ತಿಮ್ಮನಹೊಸೂರು ಗ್ರಾಮದ ರೈತ ಪುಟ್ಟಸ್ವಾಮಿ ವ್ಯವಸಾಯದೊಂದಿಗೆ ಕಳೆದ 23 ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ.

ಈ ಹಿಂದೆ ಸಾಕಷ್ಟು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದ ಪುಟ್ಟಸ್ವಾಮಿ ನಿರ್ವಹಣೆ ಕಷ್ಟವಾದ ಕಾರಣ ಈಗ ಐದಾರು ಹಸುಗಳನ್ನು ಸಾಕುತ್ತಿದ್ದಾರೆ. ಈ ಹಸುಗಳಿಂದ ಪ್ರತಿನಿತ್ಯ ಗ್ರಾಮದ ಡೇರಿಗೆ 30 ರಿಂದ 40 ಲೀಟರ್ ಹಾಲು ಹಾಕುತ್ತಿದ್ದಾರೆ. ಈಗ ಅಚ್ಚರಿ ಎಂಬಂತೆ ಹಾಲು ಕೊಡುತ್ತಿರುವ ಕರು ಮನೆಯಲ್ಲೇ ಜನ್ಮ ತಾಳಿದೆ ಎಂದು ತಿಳಿದು ಬಂದಿದೆ.

ಈ ಕರುವಿನ ತಾಯಿಯೂ ಕೂಡ ಮನೆಯಲ್ಲೇ ಜನ್ಮ ತಾಳಿದ್ದು, ಈಗಾಗಲೇ ಆ ಹಸು ಮತ್ತೊಂದು ಕರುವನ್ನು ಹಾಕಿ ಹಾಲು ಕೊಡುತ್ತಿದೆ. ಕರುವಿಗೆ 16 ತಿಂಗಳಾಗಿ ಗರ್ಭಧರಿಸುವ ವಯಸ್ಸಾಗಿದ್ದರೂ ಗರ್ಭ ಧರಿಸುವ ಸೂಚನೆಗಳು ಕಂಡು ಬಾರದ ಹಿನ್ನೆಲೆಯಲ್ಲಿ ರೈತ ಪುಟ್ಟಸ್ವಾಮಿ ಗ್ರಾಮದ ಪಶು ಚಿಕಿತ್ಸಾಲಯದ ವೈದ್ಯರಿಗೆ ತೋರಿಸಿದ್ದಾರೆ. ಈ ವೇಳೆ ವೈದ್ಯರು ಮಾತ್ರೆ ನೀಡಿ ಕೆಲ ದಿನಗಳ ಕಾಲ ಕರುವಿಗೆ ನೀಡುವಂತೆ ಸೂಚಿಸಿದ್ದಾರೆ.

ವೈದ್ಯರ ಸೂಚನೆ ಮೇರೆಗೆ ಕೆಲ ದಿನಗಳ ಕಾಲ ಮಾತ್ರೆ ಕೊಟ್ಟಿದ್ದಾರೆ. ಆದರೆ, ಆ ಕರು ಗರ್ಭಧರಿಸುವ ಬದಲು ಇದ್ದಕಿದ್ದಂತೆ ಕೆಚ್ಚಲು ಬಿಡಲು ಪ್ರಾರಂಭಿಸಿದೆ. ಕೆಲ ದಿನಗಳ ನಂತರ ಕರು ಮ್ಯಾಟ್ ಮೇಲೆ ವಿಶ್ರಾಂತಿಯಲ್ಲಿದ್ದಾಗ ಕೆಚ್ಚಲಿನಿಂದ ಹಾಲು ಸುರಿದಿದೆ. ಇದನ್ನು ಕಂಡ ಕೆ.ಪುಟ್ಟಸ್ವಾಮಿ ಅವರು ಅಚ್ಚರಿಕೊಂಡಿದ್ದಾರೆ.

ನಂತರ ಕರುವಿನ ಕೆಚ್ಚಲಿನಲ್ಲಿ ಹಾಲು ಕರೆದಾಗ ಮಾಮೂಲಿ ಹಸುಗಳಂತೆ ಹಾಲು ಕೊಡಲು ಪ್ರಾರಂಭಿಸಿದೆ. ಇದರಿಂದ ಗಾಬರಿಗೊಂಡ ರೈತ ಪುಟ್ಟಸ್ವಾಮಿ ಪಶು ಇಲಾಖೆ ಹಿರಿಯ ವೈದ್ಯಕೀಯ ಸಹಾಯಕರನ್ನು ಸಂಪರ್ಕಿಸಿದಾಗ ಹಾರ್ಮೋನ್ ಪ್ರಭಾವದಿಂದ ಲಕ್ಷಾಂತರ ಕರುಗಳ ಪೈಕಿ ಇಂತಹ ಪ್ರಕರಣಗಳು ಅಪರೂಪಕ್ಕೆ ಈ ರೀತಿಯಲ್ಲಿ ಗರ್ಭಧರಿಸಿ ಕರು ಹಾಕದೇ ಹಾಲು ಕೊಡುತ್ತವೆ ಎಂದು ಹೇಳಿದ್ದಾರೆ.

ಈ ಕರುವಿನ ಹಾಲು ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಪಶು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ವೈದ್ಯರ ಸಲಹೆಯಿಂದ ರೈತ ಕೆ.ಪುಟ್ಟಸ್ವಾಮಿ ಅವರಲ್ಲಿ ಇದ್ದ ಆತಂಕ ದೂರವಾಗಿದೆ. ನಂತರ ಎಲ್ಲಾ ಹಸುಗಳಂತೆ ಈ ಕರುನಿಂದ ಹಾಲು ಕರೆದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಡೇರಿಗೆ ಹಾಕುತ್ತಿದ್ದಾರೆ.

ಗರ್ಭಧರಿಸದೆ ಹಾಲು ಕರೆಯುತ್ತಿರುವುದನ್ನು ಕರುವಿನ ಬಗ್ಗೆ ಟಿ.ಮಲ್ಲಿಗೆರೆ ಗ್ರಾಮದ ಎಂ.ಬಿ.ಲೋಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ತಿಮ್ಮನಹೊಸೂರಿಗೆ ಆಗಮಿಸುತ್ತಿದ್ದಾರೆ. ಆಗಾಗ್ಗೆ ಸಮಾಜದಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ.ಗರ್ಭಧರಿಸದ ಕರು ಕಳೆದ 2 ತಿಂಗಳಿಂದ ಹಾಲು ಕೊಡುತ್ತಿದ್ದರೂ ಈ ವಿಚಾರವನ್ನು ಯಾರಿಗೂ ತಿಳಿಸದೆ ಕೆಲ ದಿನಗಳ ಕಾಲ ಗೌಪ್ಯವಾಗಿಟ್ಟಿದ್ದೆ. ನಿತ್ಯ ಹಾಲು ಕರೆಯುತ್ತಿರುವುದರಿಂದ ಕರುವಿನ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಎಲ್ಲಾ ಹಸುಗಳಂತೆ ಮೇವು, ತಿಂಡಿಯನ್ನು ತಿನ್ನುತ್ತಿದೆ.

- ಕೆ.ಪುಟ್ಟಸ್ವಾಮಿ, ಕರುವಿನ ಮಾಲೀಕರು