ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಮಾಜ ಸೇವಾ ಸಂಘಟನೆಗಳು ನಿರಂತರ ಶ್ರಮಿಸುತ್ತಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾಲಿಬೆಟ್ಟ

ಪತ್ರಕರ್ತರು ಸುದ್ದಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ನೆರವಾಗುತ್ತಿರುವ ಪರಿಣಾಮವೇ ಬೆಂಗಳೂರಿನ ಸಮಾಜ ಸೇವಾ ಸಂಸ್ಥೆಗಳು ಬ್ಯಾಗ್ ಕಲಿಕಾ ಪರಿಕರಗಳನ್ನು ಸರ್ಕಾರಿ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಸಮಾಜ ಸೇವಾ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಯುಎಸ್‌ಟಿ ಸಂಸ್ಥೆ ಬೆಂಗಳೂರು, ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ ಬೆಂಗಳೂರು, ನಮ್ಮ ಕೊಡಗು ತಂಡ ಮತ್ತು ಕೊಡಗು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಆಗಮಿಸುತ್ತಿದ್ದು ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯಕ್ಕೆ ನೆರವಾಗಲು ಸರ್ಕಾರಗಳು ಹಾಗೂ ವಿವಿಧ ಸಮಾಜ ಸೇವಾ ಸಂಸ್ಥೆಗಳು

ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ಬಂದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಮಾಜ ಸೇವಾ ಸಂಘಟನೆಗಳು ನಿರಂತರ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮತ್ತಷ್ಟು ದಾನಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.

ಕಲಿಕಾ ಸಾಮಗ್ರಿ ವಿತರಿಸಿ ಮಾದರಿಯಾಗಿದ್ದಾರೆ:

ಸಮಾಜ ಸೇವಕ ಡಾ. ಎ. ಸಿ. ಗಣಪತಿ ಮಾತನಾಡಿ, ಯು ಎಸ್ ಟಿ ಹಾಗೂ ಬನವಾಸಿ ಕನ್ನಡಿಗರ ತಂಡ ಬೆಂಗಳೂರಿನಿಂದ ಬಂದು ಪಾಲಿಬೆಟ್ಟದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸಾಧಿಸುವ ಛಲದೊಂದಿಗೆ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ ಟಿ ಅನಿಲ್ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲು ಸಂಘದ ಸದಸ್ಯರು ತಮ್ಮ ವರದಿಗಳ ಮೂಲಕ ಬೆಂಗಳೂರು ಸಂಸ್ಥೆಗಳ ಗಮನಸೆಳೆದು ಪಾಲಿಬೆಟ್ಟ ವ್ಯಾಪ್ತಿಯ 120 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಅನುಕೂಲವಾಗುವಂತ ಗುಣಮಟ್ಟದ ಬ್ಯಾಗ್ ಸೇರಿದಂತೆ ಒಂದು ವರ್ಷಕ್ಕೆ ಆಗುವಷ್ಟು ಕಲಿಕೆಗೆ ಪೂರಕವಾದ ಸಾಮಗ್ರಿಗಳನ್ನು ವಿತರಿಸಲು ನೆರವಾಗಿದ್ದಾರೆ.

ಯು ಎಸ್ ಟಿ, ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಇತರ ಸಂಸ್ಥೆಗಳಿಗೂ ಮಾದರಿ ಆಗಬೇಕು ಎಂದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ:

ಬನವಾಸಿ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಜೈ ಕಿರಣ್ ಮಾತನಾಡಿ, ಕಳೆದ 9 ವರ್ಷಗಳಿಂದಲೂ ಕೊಡಗು ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಗಳೊಂದಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಎಂದು ಹೇಳಿದ ಅವರು

ನಮ್ಮ ಕೊಡಗು ತಂಡದ ಸ್ಥಾಪಕ ಅಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಸೇರಿದಂತೆ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ಜನರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲು ಬೆಂಗಳೂರಿನ ಸಂಸ್ಥೆಗಳು ಕೈಜೋಡಿಸುತ್ತೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದಿಂದ ಹಲವಾರು ಕಾರ್ಯಕ್ರಮ: ಕ್ಲಸ್ಟರ್ ಸಿಆರ್ ಪಿ ಕರಂಬಯ್ಯ ಮಾತನಾಡಿ, ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು ಇದರೊಂದಿಗೆ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸಲು ಸಹಕಾರ ನೀಡುತ್ತಿರುವ ಪರಿಣಾಮವೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ರೂಪಿಸಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭ ಪಾಲಿಬೆಟ್ಟ ಪ್ರೌಢಶಾಲಾ ಮುಖ್ಯ ಶಿಕ್ಷಕ ಯು ಕೆ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬೆಳಿಗಿರಿ, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ ವಿ ರವಿಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್, ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ಪ್ರಮುಖರಾದ ಶಮಂತ ಹೊಸಹೊಳಲು, ಕಿರಣ್ಮಯಿ ಶರ್ಮ, ದುಬಾರೆ ಸರ್ಕಾರಿ ತಮಿಳು ಶಾಲಾ ಮುಖ್ಯ ಶಿಕ್ಷಕಿ ಮಲ್ಲಿಗೇಶ್ವರಿ, ಯು ಎಸ್ ಟಿ ಸಂಸ್ಥೆಯ ಮುಖ್ಯಸ್ಥ ಕಿರಣ್ ಕುಮಾರ್, ಪ್ರಮುಖರಾದ ಸ್ಮಿತಾ ಶರ್ಮಾ, ವಿಶ್ವಾಸ್, ರಾಹುಲ್, ನಿತಿನ್, ಮನು ಸೇರಿದಂತೆ ಇತರರು ಉಪಸ್ಥಿತರಿದ್ದರು.