ಸರ್ಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ, ಅಂತಹ ಅಭ್ಯರ್ಥಿ ಕೆನೆ ಪದರಕ್ಕೆ ಸೇರಲಿದ್ದು, ಮೀಸಲು ಪ್ರಮಾಣ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ, ಅಂತಹ ಅಭ್ಯರ್ಥಿ ಕೆನೆ ಪದರಕ್ಕೆ ಸೇರಲಿದ್ದು, ಮೀಸಲು ಪ್ರಮಾಣ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಕುರುಬ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ರಾಘವೇಂದ್ರ ಚಂದ್ರಣ್ಣನವರ್ ಅವರು ನೇಮಕಾತಿಯಲ್ಲಿ ಮೀಸಲು ಸೌಲಭ್ಯ ಪಡೆಯಲು ಅರ್ಹರು ಎಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ನೀಡಿತ್ತು. ಈ ಆದೇಶ ಆದೇಶ ಪ್ರಶ್ನಿಸಿ ಜಾತಿ ಹಾಗೂ ಆದಾಯ ಪರಿಶೀಲನಾ ಆಯೋಗ/ಮೇಲ್ಮನವಿ ಪ್ರಾಧಿಕಾರ, ಜಿಲ್ಲಾ ಜಾತಿ ಹಾಗೂ ಆದಾಯ ಪರಿಶೀಲನಾ ಸಮಿತಿ ಮುಖ್ಯಸ್ಥರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು.
ಈ ಮೇಲ್ಮನವಿ ಪುರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಅಭ್ಯರ್ಥಿಯ ಪೋಷಕರ ಸಂಬಳ ಸೇರಿ ಎಲ್ಲ ಮೂಲದ ಆದಾಯ ಪರಿಗಣಿಸಬೇಕು. ಒಂದು ವೇಳೆ ಆ ಆದಾಯ ನಿಗದಿತ ಮಿತಿ ದಾಟಿದರೆ ಹಾಗೂ ಪೋಷಕರು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಆಗ ಕೆನೆ ಪದರ ನಿಯಮ ಅನ್ವಯ ಆಗಲಿದೆ. ಅಭ್ಯರ್ಥಿ ಮೀಸಲಾತಿ ಕ್ಲೇಮು ಮಾಡಲು ಅವಕಾಶವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.ಈ ಪ್ರಕರಣದಲ್ಲಿ ಅಭ್ಯರ್ಥಿ ರಾಘವೇಂದ್ರ ಚಂದಣ್ಣನವರ್ ಅವರ ಪೋಷಕರ ವಾರ್ಷಿಕ ಆದಾಯವು ಹಿಂದುಳಿದ ವರ್ಗಗಳ 2ಎ ಪ್ರವರ್ಗದವರಿಗೆ ನಿಗದಿಪಡಿಸಿರುವ ₹8 ಲಕ್ಷಕ್ಕಿಂತ ಹೆಚ್ಚಿದೆ. ಮೇಲಾಗಿ ಆದಾಯ ತೆರಿಗೆ ಪಾವತಿದಾರಾಗಿದ್ದಾರೆ. ಅದರಂತೆ ಅಭ್ಯರ್ಥಿ ಮೀಸಲಾತಿ ಸೌಲಭ್ಯ ಕ್ಲೇಮು ಮಾಡಲಾಗದು. ಹಿಂದುಳಿದ ವರ್ಗಗಳಡಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದು ಹೇಳಿ, ಆದಾಯ ಪರಿಶೀಲನಾ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪುರಸ್ಕರಿಸಿದೆ.