ಕಡೇಗರ್ಜೆ ಬಳಿ ಸುಟ್ಟು ಕರಕಲಾದ ಕಾರು

| Published : Jan 11 2025, 12:46 AM IST

ಸಾರಾಂಶ

ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಗರ್ಜೆ ಗ್ರಾಮದ ಬಳಿ ರಸ್ತೆ ಪಕ್ಕ ನಿಲ್ಲಿಸಿದ ಕಿಯಾ ಸೆಲ್ವಾಸ್ ಕಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್, ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಎಂಜಿನ್ ಬಳಿ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ರಸ್ತೆ ಪಕ್ಕಕ್ಕೆ ಕಾರು ನಿಲ್ಲಿಸಿದ್ದರು. ಅವರು ಕಾರಿನಿಂದ ಕೆಳಗಿಳಿದ ತಕ್ಷಣ, ದಿಢೀರ್ ಬೆಂಕಿ ವ್ಯಾಪಿಸಿ ಕೆಲವೇ ಸೆಕೆಂಡುಗಳಲ್ಲಿ ವಾಹನವನ್ನು ಸುಟ್ಟುಹಾಕಿತು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಗರ್ಜೆ ಗ್ರಾಮದ ಬಳಿ ರಸ್ತೆ ಪಕ್ಕ ನಿಲ್ಲಿಸಿದ ಕಿಯಾ ಸೆಲ್ವಾಸ್ ಕಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್, ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಸುಬ್ರಮಣ್ಯಕ್ಕೆ ಪ್ರಯಾಣಿಸುತ್ತಿದ್ದ ಡಾ. ಶೇಷಾದ್ರಿ ಮತ್ತು ಅವರ ಪತ್ನಿ ಮುಂಜಾನೆ ಸುಮಾರು 3.30ರ ವೇಳೆಯಲ್ಲಿ ಕಡೇಗರ್ಜೆ ಗ್ರಾಮದ ಬಳಿ ಕಾರಿನ ಎಂಜಿನ್ ಬಳಿ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ರಸ್ತೆ ಪಕ್ಕಕ್ಕೆ ಕಾರು ನಿಲ್ಲಿಸಿದ್ದರು. ಅವರು ಕಾರಿನಿಂದ ಕೆಳಗಿಳಿದ ತಕ್ಷಣ, ದಿಢೀರ್ ಬೆಂಕಿ ವ್ಯಾಪಿಸಿ ಕೆಲವೇ ಸೆಕೆಂಡುಗಳಲ್ಲಿ ವಾಹನವನ್ನು ಸುಟ್ಟುಹಾಕಿತು.

ಮುಂಜಾನೆ ಸಮಯವಾದ ಕಾರಣ ಜನ ಸಂಚಾರ ವಿರಳವಾದ್ದರಿಂದ ಸಹಾಯಕ್ಕಾಗಿ ಯಾರೂ ಲಭ್ಯವಾಗಲಿಲ್ಲ. ದಂಪತಿಗಳು ತಮ್ಮ ಮುಂದೆಯೇ ಕಾರು ಹೊತ್ತಿ ಉರಿಯುವುದನ್ನು ಅಸಹಾಯಕರಾಗಿ ನೋಡುವಂತಾಯಿತು. ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿ ತಿಳಿಸಿದರೂ ಅವರು ಬರುವ ಹೊತ್ತಿಗಾಗಲೇ ಸುಟ್ಟು ಕರಕಲಾಗಿತ್ತು. ಕಾರು ಸಂಪೂರ್ಣ ಸುಟ್ಟುಹೋಗಿದೆ. ಆದರೆ ದಂಪತಿಗಳು ಸಮಯೋಚಿತವಾಗಿ ಕಾರಿನಿಂದ ಇಳಿದಿರುವುದರಿಂದ ಭೀಕರ ಅಪಘಾತ ತಪ್ಪಿದಂತಾಗಿದೆ.