ಸಾರಾಂಶ
ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ನವರಾಗಿದ್ದು, ಹಾಲಿ ಬೆಂಗಳೂರಿನ ಬಗಲಗುಂಟೆ ವಾಸವಾಗಿದ್ದ ತಾಯಿ ಕಲಾ(40), ಪುತ್ರ ದರ್ಶನ್ (20), ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳು ಮೇಘ ಹಾಗೂ ಅಳಿಯ ಮಂಜುನಾಥ್ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮದ್ದೂರು: ಬೆಂಗಳೂರು - ಮೈಸೂರು ಹೆದ್ದಾರಿಯ ತಾಲೂಕಿನ ರುದ್ರಾಕ್ಷಿಪುರ ಪ್ಲೈ ಓವರ್ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಕಂಬಕ್ಕೆ ಕಾರು ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟು, ಅಳಿಯ, ಮಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ನವರಾಗಿದ್ದು, ಹಾಲಿ ಬೆಂಗಳೂರಿನ ಬಗಲಗುಂಟೆ ವಾಸವಾಗಿದ್ದ ತಾಯಿ ಕಲಾ(40), ಪುತ್ರ ದರ್ಶನ್ (20), ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳು ಮೇಘ ಹಾಗೂ ಅಳಿಯ ಮಂಜುನಾಥ್ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಷಾಢ ಶುಕ್ರವಾರದ ಅಂಗವಾಗಿ ಕುಟುಂಬಸ್ಥರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವರ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಳಿಯ ಮಂಜುನಾಥ್ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹೆದ್ದಾರಿಯ ರುದ್ರಾಕ್ಷಿಪುರ ಪ್ಲೈ ಓವರ್ ನಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಸಂಚಾರ ನಿಯಂತ್ರಣ ಉಲ್ಲಂಘಿಸುವ ವಾಹನಗಳ ಪತ್ತೆಗೆ ಅಳವಡಿಸಿದ್ದ ಕ್ಯಾಮರಾ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸಂಚಾರಿ ಠಾಣೆ ಪಿಎಸ್ ಐ ಎಂ.ಜೆ.ಮಹೇಶ್ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.