ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸ್ನೇಹಿತರೊಂದಿಗೆ ಹೊಸ ವರ್ಷದ ಮುಂಜಾನೆ ತನಕ ಪಾರ್ಟಿ ಮಾಡಿ ವಾಪಸ್ ಮನೆಗೆ ತೆರಳುವಾಗ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೂ ತೀವ್ರತರದ ಗಾಯಗಳಾದ ಘಟನೆ ತಾಲೂಕಿನ ಕೊಡಸೋಗೆ-ಕಂದೇಗಾಲ ರಸ್ತೆಯ ಕಂಬಾರಗುಂಡಿ ಬಳಿ ಬುಧವಾರ ನಸುಕಿನ ಜಾಗ ನಡೆದಿದೆ.ಬೊಮ್ಮಲಾಪುರ ಸೆಸ್ಕ್ ಕಚೇರಿಯಲ್ಲಿ ಕಿರಿಯ ಪವರ್ ಮ್ಯಾನ್ ಎಚ್.ಪಿ.ಪ್ರತಾಪ್ ಕುಮಾರ್ (೨೮), ಕಾರಲ್ಲಿದ್ದ ಕೊಡಸೋಗೆ ಗ್ರಾಮದ ಕೊಂಗಳಯ್ಯ (೪೬) ಕಾರಲ್ಲೆ ಪ್ರಾಣ ಕಳೆದುಕೊಂಡಿದ್ದರು. ಹಿಂಬದಿ ಸೀಟಲ್ಲಿದ್ದ ಅಭಿಷೇಕ್‌ಗೂ ತೀವ್ರ ಗಾಯವಾಗಿವೆ. ಸಾವನ್ನಪ್ಪಿದ ಇಬ್ಬರು, ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಮೃತರ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವವನ್ನು ಪೊಲೀಸರು ಒಪ್ಪಿಸಿದ್ದಾರೆ.
ಏನಿದು ಘಟನೆ?:ಸಾವನ್ನಪ್ಪಿದ ಎಚ್.ಪಿ.ಪ್ರತಾಪ್ ಕುಮಾರ್, ಕೊಂಗಳಯ್ಯ, ಅಭಿಷೇಕ್ ಗುಂಡ್ಲುಪೇಟೆಯಲ್ಲಿ ಹೊಸ ವರ್ಷದ ಮುನ್ನ ದಿನ ಪಾರ್ಟಿಗೆ ಹೋಗಿದ್ದರು. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಬುಧವಾರ ನಸುಕಿನ ತನಕ ಪಾರ್ಟಿಯಲ್ಲಿದ್ದು ಕೊಡಸೋಗೆಗೆ ಎಚ್.ಪಿ.ಪ್ರತಾಪ್ ಕುಮಾರ್ ಗೆ ಸೇರಿದ ಕೆಎ೧೧ ಎನ್ ೫೫೧೦ ಮಾರುತಿ ಬುಲೇನೋ ಕಾರಲ್ಲಿ ಕಂದೇಗಾಲ ರಸ್ತೆಯಲ್ಲಿ ಕೊಡಸೋಗೆಗೆ ತೆರಳುವಾಗ ನಸುಕಿನ ಜಾವ, ನಿದ್ದೆಗೆ ಜಾರಿಯೋ ಅಥವಾ ಮದ್ಯದ ಅಮಲಿನಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮೂರ್ನಾಲ್ಕು ತುಂಡುಗಳಾಗಿ ಬಿದ್ದಿವೆ.
ಬೊಮ್ಮಲಾಪುರ ಜೂನಿಯರ್ ಎಂಜಿನಿಯರ್ ಮಯೂರ ನೀಡಿದ ದೂರಿನ ಮೇರೆಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಗುಂಡಿನ ಮತ್ತೇ ಗಮ್ಮತ್ತು,ಅಳತೆ ಮೀರಿದರೇ ಆಪತ್ತು!
ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೇ ಆಪತ್ತು ಎಂಬ ಚಲನಚಿತ್ರದ ಗಾದೆಯಂತೆ ಗುಂಡನ್ನು ವಿಪರೀತ ಕುಡಿದು ವಾಹನ ಚಲಿಸಿದರೆ ಅಪಘಾತ ಖಚಿತ ಎಂಬಂತೆ ಕೊಡಸೋಗೆ ಬಳಿ ನಡೆದ ಕಾರು ದುರಂತವೇ ಸಾಕ್ಷಿಯಾದಂತಿದೆ. ಗುಂಡು ಅಳತೆಯಲ್ಲಿದ್ದರೆ ಚೆನ್ನ, ಗುಂಡು ಮಿತಿ ಮೀರಿದರೆ ಕೊಡಸೋಗೆ ರಸ್ತೆ ಬಳಿ ಬುಧವಾರ ಮುಂಜಾನೆ ನಡೆದ ಅಪಘಾತದ ದೃಶ್ಯ ನೋಡಿದರೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬವೇ ಕಿತ್ತು ಮೂರ್ನಾಲ್ಕು ತುಂಡುಗಳಾಗಿವೆ ಸಾಕ್ಷಿ ಎನ್ನಬಹುದು.