ಅಂಬೇಡ್ಕರ್ ಸಂವಿಧಾನಕ್ಕೆ ಕೋರೆಗಾಂವ್ ಯುದ್ಧವೇ ಪ್ರೇರಣೆ: ಚಂಡೂರು ರಮಣ

| Published : Jan 02 2025, 12:30 AM IST

ಸಾರಾಂಶ

ಭೀಮಾ ನದಿಯ ದಡದಲ್ಲಿ ಕೋರೆಗಾಂವ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು. ಪೇಶ್ವೆಯ ಸೈನ್ಯದಲ್ಲಿದ್ದ ಆಯುಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. 22 ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧ ಇದಾಗಿತ್ತು .

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಶೋಷಿತ ಜನಾಂಗದ 500 ಮಹರ್ ಸೈನಿಕರು, ಶೋಷಣೆ ಮಾಡುತ್ತಿದ್ದ ಮಹಾರಾಷ್ಟ್ರದ 28 ಸಾವಿರ ಪೇಶ್ವೆ ಸೈನಿಕರ ವಿರುದ್ಧ 1818ರ ಜನವರಿ 1ರಂದು ಜಯ ಸಾಧಿಸಿದರು. ಆದ್ದರಿಂದ ಈ ದಿನವನ್ನು ಶೋಷಣೆಯ ವಿರುದ್ಧ ಹೋರಾಡಿ ಜಯಿಸಿದ ದಿನವೆಂದು ಆಚರಿಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಎಲ್.ಎನ್.ಈಶ್ವರಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುಡಿಬಂಡೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಅಂಬೇಡ್ಕರ್ ರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿ, 12 ಗಂಟೆಗಳ ಹೋರಾಟದಲ್ಲಿ 22 ಜನ ಹುತಾತ್ಮರಾದರು. ಅಂಬೇಡ್ಕರ್ ಅವರು ಈ ಯುದ್ಧವನ್ನು ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನದ ಯುದ್ಧ ಎಂದು ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಈ ಹೋರಾಟದಲ್ಲಿ ಮಡಿದಂತಹ ವೀರ ಸೈನಿಕರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

ಬಳಿಕ ದಲಿತ ಸಂಘರ್ಷ ಸಮಿತಿಯ ಮುಖಂಡ ಚೆಂಡೂರು ರಮಣ ಮಾತನಾಡಿ, ದೇಶದಾದ್ಯಂತ ಇಂದು ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಸ್ವಾಭಿಮಾನಕ್ಕಾಗಿ, ಗೌರವವಕ್ಕಾಗಿ ಈ ಹೋರಾಟ ನಡೆದಿತ್ತು. ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದಿರುವ ಇಂಥ ಹೋರಾಟಗಳೇ ಉತ್ತಮ ಸಂವಿಧಾನ ನಿರ್ಮಾಣವಾಗಲು, ಜನರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಅಸ್ಪೃಶ್ಯರೆಂದು ಗುರುತಿಸಿಕೊಂಡ ಜನರು ಈ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪೇಶ್ವೆಗಳ ಜಾತೀಯತೆಯ ವಿರುದ್ಧ ಪಡೆದ ಗೆಲುವಾಗಿ ಕೋರೆಗಾಂವ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೇ ಬ್ರಿಟಿಷರು ಸಹ ಈ ವಿಜಯೋತ್ಸವದಲ್ಲಿ ಮಡಿದಂತಹ ನಾಯಕರಿಗೆ ಗೌರವ ನಮನ ಸಲ್ಲಿಸುತ್ತಾರೆ ಎಂದರು.

ಜೀವಿಕ ಸಂಘಟನೆಯ ನಾರಾಯಣಸ್ವಾಮಿ ಮಾತನಾಡಿ, ಭೀಮಾ ನದಿಯ ದಡದಲ್ಲಿ ಕೋರೆಗಾಂವ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು. ಪೇಶ್ವೆಯ ಸೈನ್ಯದಲ್ಲಿದ್ದ ಆಯುಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. 22 ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧ ಇದಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದ ವೀರ ಸೇನಾನಿಗಳನ್ನು ನೆನಪಿಸುವಂತಹ ಗೀತೆಯನ್ನು ಹಾಡಲಾಯಿತು. ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಚೆನ್ನರಾಯಪ್ಪ, ರಾಜು, ಚಿಕ್ಕನರಸಿಂಹಪ್ಪ, ನರಸಿಂಹಪ್ಪ, ರಾಮಾಂಜಿ, ರವಿ, ಸುಬ್ಬರಾಯಪ್ಪ ಸೇರಿ ಹಲವರು ಇದ್ದರು.