ಸಾರಾಂಶ
ರಾಷ್ಟ್ರೀಯ ವೃತ್ತಿ ರಂಗೋತ್ಸವ । ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ದಾವಣಗೆರೆವೃತ್ತಿ ರಂಗಭೂಮಿಯು ನಮ್ಮ ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಬೇಕು. ಮುಖ್ಯವಾಗಿ ಜನಮುಖಿಯಾಗಿರಬೇಕು ಎಂದು ಹಿರಿಯ ಲೇಖಕ ಡಾ.ಎ.ಬಿ.ರಾಮಚಂದ್ರಪ್ಪ ಪ್ರತಿಪಾದಿಸಿದರು.
ಇಲ್ಲಿನ ವೃತ್ತಿ ರಂಗಭೂಮಿ ರಂಗಾಯಣವು ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವ ಅಂಗವಾಗಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಹೀಗೆಯೇ ರಂಗಭೂಮಿ ಮುಖೇನ ಯುವಜನರನ್ನು ಎಚ್ಚರಿಸುವುವದರ ಜತೆಗೆ ಮಹಿಳಾ ಸಬಲೀಕಣಗೊಳಿಸುವ ಜವಾಬ್ದಾರಿ ವೃತ್ತಿ ರಂಗಭೂಮಿಗಿದೆ ಎಂದರು.ರಂಗಭೂಮಿಯ ಮೂಲಕ ಸಂವಿಧಾನದ ಆಶಯಗಳನ್ನು ತಲುಪಿಸಬೇಕಿದೆ. ಯುವಜನರಿಗೆ ಈ ದೇಶದ ಸಂವಿಧಾನಿಕ ಮೌಲ್ಯಗಳನ್ನು, ಸಾಮಾಜಿಕ ಜವಾಬ್ದಾರಿಗಳನ್ನು ಮತ್ತು ಪಾರಂಪರಿಕ ಮೌಲ್ಯಗಳನ್ನು ತಲುಪಿಸುವುದರ ಜೊತೆಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ ದೊಡ್ಡ ಜವಾಬ್ದಾರಿ ರಂಗಭೂಮಿ ಮೇಲಿದೆ. ರಂಗಭೂಮಿಯ ಅರ್ಧ ಯಶಸ್ಸು ಮಹಿಳೆಯರದು. ಆದರೆ ಅವರನ್ನು ಇತ್ಯಾತ್ಮಕವಾಗಿ ನೋಡಿಲ್ಲ. ರಾಮಾಯಣ, ಮಹಾಭಾರತ ಕಾಲದಿಂದಲೂ ಎಲ್ಲ ಅನಾಹುತಗಳಿಗೆ ಹೆಣ್ಣೇ ಕಾರಣ ಎಂದು ಬಿಂಬಿಸಲಾಗಿದೆ. ಹೀಗೆ ಗಂಡಾಳ್ವಿಕೆಯ ಮೂಲಕ ರಾಮಾಯಣ, ಮಹಾಭಾರತವನ್ನು ನೋಡದೆ ಹೆಣ್ಣಿನ ಮೂಲಕ ನೋಡಬೇಕು ಎಂದು ಕಿವಿಮಾತು ಹೇಳಿದರು.
ವೃತ್ತಿ ರಂಗಭೂಮಿಯನ್ನು ಆಳಿದವರು ಪುರುಷರೇ. ಹೀಗಿದ್ದಾಗ ಮಹಿಳೆಯರು ಪಾತ್ರ ನಿರ್ವಹಿಸುತ್ತಾರೆಂದರೆ ಕೀಳಾಗಿ ನೋಡುವವರೇ ಹೆಚ್ಚು. ಅವರನ್ನು ತುಚ್ಛೀಕರಿಸಿ ನೋಡದೆ, ಕೀಳಾಗಿ ಮಾತಾಡದೆ ಗೌರವದಿಂದ ಕಾಣಬೇಕು. ಇದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಸಲಹೆ ನೀಡಿದರು.ಕನ್ನಡದ ಅಸ್ಮಿತೆಯನ್ನು ಅತ್ಯಂತ ಶ್ರೀಮಂತವಾಗಿ ಉಳಿಸಿದವರು ರಂಗಭೂಮಿಯ ಕಲಾವಿದರು. ಹಲವು ಕನ್ನಡಗಳನ್ನು ಉಳಿಸಿದ, ಜನಭಾಷೆಯನ್ನು ಕಲಾಮಾಧ್ಯಮವಾಗಿಸಿ ಉಳಿಸಿದ್ದು ರಂಗಭೂಮಿ. ಆದರೆ ನಾಟಕಕಾರರು ಬಳಸಿದ ಸಂಭಾಷಣೆ, ನಟರು ಬಳಸುವ ಸಂಭಾಷಣೆ ಕುರಿತು ಸಂಶೋಧನೆ ನಡೆಯಬೇಕಿದೆ ಎಂದರು.
ಹಿರಿಯ ಪತ್ರಕರ್ತ ಅಜಿತ್ ಘೋರ್ಪಡೆ ‘ಯುವ ಚಿಂತನೆ, ರಂಗ ಪ್ರಯೋಗ, ಹೊರಳು ಹಾದಿಯ ಹಾಸ್ಯ’ ಕುರಿತು ಮಾತನಾಡಿ, ಯುವಕಲಾವಿದರಲ್ಲಿ ಪ್ರತಿಭೆಯಿದೆ. ಆದರೆ ಅಧ್ಯಯನದ ಕೊರತೆಯಿದೆ. ಇದಕ್ಕಾಗಿ ಅಧ್ಯಯನದ ಜೊತೆಗೆ ಶಿಸ್ತು ಮತ್ತು ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕಿದೆ. ವೃತ್ತಿ ರಂಗಭೂಮಿಯ ನಾಟಕಗಳು ಹಾಸ್ಯ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ ಎಂದರು.ನಾಟಕಕಾರ್ತಿ ಡಾ.ಸುಜಾತಾ ಅಕ್ಕಿ ಮಾತನಾಡಿ, ವೃತ್ತಿ ಕಂಪನಿಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ ಹಾಗೂ ಅನವಶ್ಯಕ ನೃತ್ಯಗಳಿರುತ್ತವೆ. ಇದರೊಂದಿಗೆ ಕಲಾವಿದೆಯರಿಗೆ ಮರ್ಯಾದೆ ಮತ್ತು ಮಹತ್ವ ಕೊಡುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹೆಣ್ಣನ್ನು ಕೇಂದ್ರೀಕರಿಸಿಕೊಂಡು ನಾಟಕಗಳ ಹೆಸರುಗಳನ್ನೇ ಬದಲಾಯಿಸಲಾಗುತ್ತಿದೆ ಜೊತೆಗೆ ವಾದ್ಯಗಳ ಅಬ್ಬರ ಹೆಚ್ಚುತ್ತಿದೆ. ಇದರಿಂದ ಸಂಭಾಷಣೆ ಕೇಳದ ಪರಿಸ್ಥಿತಿಯಿದೆ. ಇದಕ್ಕಾಗಿ ಒಳ್ಳೆಯ ಸಂದೇಶಗಳನ್ನು ನೀಡುವ ನಾಟಕಗಳು ಪ್ರದರ್ಶನಗೊಳ್ಳಲಿ ಎಂದರು.ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶೃತಿರಾಜ್ ರಂಗಗೀತೆಗಳನ್ನು ಹಾಡಿದರು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ರಂಗಕರ್ಮಿ ಸಿದ್ಧರಾಜು ವಂದಿಸಿದರು.