ದಿನಕ್ಕೊಂದು ಕೊಲೆ ಪ್ರಕರಣ: ಮಹಾನಗರ ಜನತೆ ತಲ್ಲಣ

| Published : Feb 10 2024, 01:49 AM IST

ಸಾರಾಂಶ

ಹೆಚ್ಚುತ್ತಿರುವ ಅಪರಾಧ ಪ್ರಕರಣ ತಡೆಗಟ್ಟುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹೆಚ್ಚಿಸಿದ ಕಮಿಷನರೇಟ್‌ ಪೊಲೀಸ್‌ ಗಸ್ತು ಹೆಚ್ಚಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ದಿನಕ್ಕೊಂದು ಕೊಲೆಗಳಿಂದ ಜನತೆ ತಲ್ಲಣಗೊಂಡಿದ್ದರೆ, ಪೊಲೀಸರ ನಿದ್ದೆಗೆಡಿಸಿದೆ. ಗಸ್ತು ಹೆಚ್ಚಿಸಲಾಗಿದೆಯಾದರೂ ಅಪರಾಧ ಪ್ರಕರಣ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಜನವರಿ 31ರಿಂದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೆರಡು ದಿನ ಹೊರತುಪಡಿಸಿದರೆ ಪ್ರತಿದಿನ ಕೊಲೆಗಳು ನಡೆಯುತ್ತಲೇ ಇವೆ. ಇನ್ನು ಮಾರಣಾಂತಿಕ ಹಲ್ಲೆ, ಹಾಫ್‌ ಮರ್ಡರ್‌ ಕೂಡ ನಡೆಯುತ್ತಲೆ ಇವೆ. ಇವು ಪೊಲೀಸರನ್ನು ನಿದ್ದೆಗೆಡಿಸಿವೆ.

ಜನವರಿ 31ರಂದು ಹುಬ್ಬಳ್ಳಿ ಎಂಟಿಎಸ್‌ ಕಾಲನಿಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿತ್ತು. ಆ ಪ್ರಕರಣವನ್ನು ಪೊಲೀಸರು ಎರಡೇ ದಿನದಲ್ಲೇ ಭೇದಿಸಿದ್ದುಂಟು. ಅದಾದ ಬಳಿಕ 2ನೇ ತಾರೀಕಿನಂದು ಮಾತ್ರ ಕೊಲೆ ನಡೆದಿಲ್ಲ. ಆದರೆ ಫೆ. 4, 5, 6, 7 ಹಾಗೂ 8ನೇ ತಾರೀಕುಗಳಂದು ಧಾರವಾಡದಲ್ಲಿ ನಿರಂತರವಾಗಿ ಕೊಲೆಗಳು ನಡೆದಿವೆ. ಎಂಟು ದಿನಗಳಲ್ಲಿ ಬರೋಬ್ಬರಿ 6 ಕೊಲೆಗಳು ನಡೆದಿವೆ.

4ರಂದು ವಿದ್ಯಾಗಿರಿ ಬಳಿ ಯುವಕನೊಬ್ಬನೊಂದಿಗೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇದನ್ನು ಬಿಡಿಸಲು ಬಂದಿದ್ದ ದಾರಿಹೋಕನನಿಗೂ ಚಾಕುವಿನಿಂದ ಇರಿಯಲಾಗಿದೆ. 5ರಂದು ವಾಹನ ಪಕ್ಕಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ಕೊಲೆ ಮಾಡಲಾಗಿದೆ. 6ರಂದು ಆಸ್ತಿಗಾಗಿ ಮಹಿಳೆ ಕೊಲೆ, 7ರಂದ ರೊಟ್ಟಿ ತಯಾರಿಸಲು ವಿಳಂಬ ಮಾಡಿದ್ದಕ್ಕೆ ಸ್ನೇಹಿತನಿಂದಲೇ ಕೊಲೆ, 8ರಂದು ಬಾಲಕಿಯ ಕೊಲೆ ಹೀಗೆ ಬರೋಬ್ಬರಿ 6 ಕೊಲೆಗಳು, ನಾಲ್ಕಾರು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಇವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿವೆ.

ಕ್ಷುಲ್ಲಕ ಕಾರಣ

ಎಲ್ಲ ಕೊಲೆಗಲು ಬಹುತೇಕ ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಕೊಲೆಗಳು. ಜತೆಗೆ ಈ ಎಲ್ಲ ಕೊಲೆಗಳಲ್ಲಿ ಪಾಲ್ಗೊಂಡವರ ಬಗ್ಗೆ ಈ ಹಿಂದೆ ಒಂದೇ ಒಂದು ಕೇಸ್‌ ಕೂಡ ದಾಖಲಾಗಿರಲಿಲ್ಲ. ಯಾರೊಬ್ಬರು ರೌಡಿಶೀಟರ್‌ಗಳಲ್ಲ. ಗೂಂಡಾ ಕಾಯ್ದೆಯಡಿ ಬಂಧಿತರಾದವರಲ್ಲ. ಹೀಗಾಗಿ ಈ ಕೊಲೆ ಪ್ರಕರಣಗಳನ್ನು ತಡೆಗಟ್ಟುವುದು ಪೊಲೀಸರಿಗೆ ಅಸಾಧ್ಯ. ಅವರೊಳಗೆ ಜಗಳವಾಡಿಕೊಂಡು ಕ್ಷುಲ್ಲಕ ಕಾರಣಕ್ಕೆ ಕೊಲೆಗಳಾದರೆ ಹೇಗೆ ತಡೆಗಟ್ಟುವುದು ಎಂಬುದು ಪೊಲೀಸರ ಅಂಬೋಣ.

ಆದರೂ ಕೊಲೆ ಪ್ರಕರಣಗಳನ್ನು ತಡೆಗಟ್ಟಲು ಗಸ್ತು ಹೆಚ್ಚಿಸಲಾಗಿದೆ. ಅನಿರೀಕ್ಷಿತವಾಗಿ ಗಸ್ತು ಡ್ಯೂಟಿ ಹಾಕಲಾಗಿದೆ. ಅಪರಾಧ ಪ್ರಕರಣ ತಡೆಗಟ್ಟಲು ಏನು ಬೇಕೋ ಆ ಕೆಲಸವನ್ನು ಕಮಿಷನರೇಟ್‌ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗಾಂಜಾ

ಕೊಲೆಯಾದವರು, ಕೊಲೆ ಮಾಡಿದವರೆಲ್ಲರೂ ಬಹುತೇಕ ಯುವ ಸಮೂಹವೇ ಆಗಿದೆ. ಮಹಾನಗರ ವ್ಯಾಪ್ತಿಯಲ್ಲಿ ಇಷ್ಟೊಂದು ಅಪರಾಧ ಪ್ರಕರಣ ಹೆಚ್ಚಾಗಲು ಗಾಂಜಾದ ಪ್ರಭಾವವೂ ಇಲ್ಲ ಎನ್ನಲಾಗದು. ಚಿಕ್ಕಮಕ್ಕಳಿಂದ ಹಿಡಿದು ಯುವ ಸಮೂಹವೆಲ್ಲ ಇದೀಗ ಗಾಂಜಾ ದಾಸರಾಗುತ್ತಿದ್ದಾರೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸಾಗಾಟಕ್ಕೆ ಕಡಿವಾಣ ಹಾಕಿದರೆ ಇಂಥ ಅಪರಾಧ ಪ್ರಕರಣಗಳು ತಾನಾಗಿಯೇ ಕಡಿಮೆಯಾಗುತ್ತವೆ.. ಗಾಂಜಾ ನಶೆಯಲ್ಲಿ ಕ್ಷುಲ್ಲಕ ಕಾರಣಗಳಿಗೆಲ್ಲ ಕೊಲೆ, ಕೊಲೆ ಯತ್ನ ಪ್ರಕರಣಗಳು ನಡೆಯುತ್ತಿವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಧಾರವಾಡ ಕಮಿಷನರ್‌ ರೇಣುಕಾ ಸುಕುಮಾರ, ಕೊಲೆ ಪ್ರಕರಣ ಹೆಚ್ಚುತ್ತಿರುವುದು ನಿಜ. ಆದರೆ, ಎಲ್ಲ ಕೊಲೆಗಳು ವೈಯಕ್ತಿಕ, ಕ್ಷುಲ್ಲಕ ಕಾರಣಕ್ಕೆ ನಡೆದಂತಹ ಕೊಲೆಗಳು. ಯಾರೊಬ್ಬರ ಬಗ್ಗೆಯೂ ಮೊದಲು ಪೊಲೀಸ್‌ ರೇಕಾರ್ಡ್‌ ಇರಲಿಲ್ಲ. ಆದರೂ ಅಪರಾಧ ಪ್ರಕರಣ ತಡೆಗಟ್ಟಲು ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ವ್ಹೀಲಿಂಗ್‌ ಮಾಡುವ ಯುವಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.