ರಾಜಧಾನಿಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

| Published : Jan 15 2025, 01:45 AM IST

ರಾಜಧಾನಿಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸೂರ್ಯ ನಮಸ್ಕಾರ, ಪರಸ್ಪರ ಎಳ್ಳುಬೆಲ್ಲ ವಿತರಣೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳ ಮೂಲಕ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೂರ್ಯ ನಮಸ್ಕಾರ, ಪರಸ್ಪರ ಎಳ್ಳುಬೆಲ್ಲ ವಿತರಣೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳ ಮೂಲಕ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮಕರ ಸಂಕ್ರಮಣದ ಸಡಗರ ಸಿಲಿಕಾನ್‌ ಸಿಟಿಯಲ್ಲಿ ಮನೆ ಮಾಡಿತ್ತು. ನಗರದ ಎಲ್ಲ ದೇಗುಲಗಳಲ್ಲಿಯೂ ಅಲಂಕಾರ, ವಿಶೇಷ ಪೂಜೆಗಳು ಜರುಗಿದವು. ಸಂಬಂಧಿಕರು, ಸ್ನೇಹಿತರು ಸೇರಿ ಸಂಕ್ರಾಂತಿಯ ಎಳ್ಳು ಬೆಲ್ಲವನ್ನು ಪರಸ್ಪರ ವಿತರಿಸಿಕೊಂಡು ಒಳ್ಳೆಯ ಮಾತನಾಡೋಣವೆಂದು ಶುಭ ಕೋರಿಕೊಂಡರು. ಪೊಂಗಲ್ ಸೇರಿದಂತೆ ಕಬ್ಬು, ಕೊಬ್ಬರಿ, ಗೆಣಸು, ಕಡಲೆಕಾಯಿ, ಬಾಳೆಹಣ್ಣು ಮತ್ತು ಅವರಕಾಯಿಗಳಿಂದ ವಿಶೇಷ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.

ಸುಧಾಮನಗರ ಸೇರಿದಂತೆ ವಿವಿಧೆಡೆ ತಮಿಳು, ಕೇರಳ ಮೂಲದ ಜನತೆ ಸಾಮೂಹಿಕವಾಗಿ ಪೊಂಗಲ್ ತಯಾರಿಸಿ ಸಂಭ್ರಮಿಸಿದರು. ನಗರದ ಬಿಟಿಎಂ ಬಡಾವಣೆ, ಕೋರಮಂಗಲ, ಜಕ್ಕಸಂದ್ರ, ಲಕ್ಕಸಂದ್ರ ಸೇರಿ ಗೋಪೂಜೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಕ್ರೀಡಾ ಚಟುವಟಿಕೆ, ಸುಗ್ಗಿ-ಹುಗ್ಗಿಯಂತ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಗರದ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ, ದೊಮ್ಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲ, ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ, ಗಾಳಿ ಆಂಜನೇಯ, ಕೋಟೆ ವೆಂಕಟರಮಣ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ಬೇಗೂರು ನಾಗನಾಥೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಪುಷ್ಪಾಭಿಷೇಕ, ಮಹಮಂಗಳಾರತಿ‌, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಿವಿಧೆಡೆ ಬೆಳಗ್ಗೆ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವೂ ನಡೆಯಿತು.

ಕಿಚ್ಚು ಹಾಯಿಸುವ ಆಚರಣೆ:

ಸಂಜೆ ಜಯನಗರದ ಎರಡನೇ ಹಂತ ಕನಕನ ಪಾಳ್ಯದಲ್ಲಿ ರೈತರು ಗೋವುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಾಂಪ್ರದಾಯಿಕ ಆಚರಣೆ ನಡೆಸಿದರು. ಹನುಮಂತ ನಗರ, ಗವಿಪುರ ಗುಟ್ಟಳ್ಳಿ ಸೇರಿ ಇನ್ನಿತರೆಡೆ ಗೋವುಗಳನ್ನು ಪೂಜಿಸಿ ಕಿಚ್ಚು ಹಾಯಿಸಲಾಯಿತು.

ಮೋಡ ಕವಿದಿದ್ದರಿಂದ ಬೆಳಕು ಪ್ರವೇಶಿಸಿಲ್ಲ

ಮೋಡ ಕವಿದಿದ್ದ ಕಾರಣ ಪುರಾಣ ಪ್ರಸಿದ್ಧ ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ ಗೋಚರಿಸದೆ ಭಕ್ತರಲ್ಲಿ ನಿರಾಸೆ ಉಂಟಾಯಿತು. ಸಂಜೆ 5.14ರಿಂದ 5.17ರವರೆಗೆ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ನಿರೀಕ್ಷೆಯಿತ್ತು. ಆದರೆ, ಮೋಡ ಕವಿದಿದ್ದರಿಂದ ಸೂರ್ಯನ ಬೆಳಕು ದೇಗುಲ ಪ್ರವೇಶಿಸಿದ್ದು ಗೋಚರಿಸಲಿಲ್ಲ. ಸೂರ್ಯರಶ್ಮಿ ಸ್ಪರ್ಶ ನೋಡಲು ಮಧ್ಯಾಹ್ನವೇ ದೇಗುಲದ ಆವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕಾತುರದಿಂದ ನೆರೆದಿದ್ದರು. ಪೆಂಡಾಲ್‌ ವ್ಯವಸ್ಥೆ, ಎಲ್‌ಇಡಿ ಸ್ಕ್ರೀನ್‌ ಮೂಲಕ ನೇರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ: ದೀಕ್ಷಿತರು

ಸೂರ್ಯರಶ್ಮಿ ಸ್ಪರ್ಶ ಆಗದ ಬಗ್ಗೆ ಸೋಮಸುಂದರ ದೀಕ್ಷಿತರು ಮಾತನಾಡಿ, ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರಕೃತಿಯಲ್ಲಿನ ಬದಲಾವಣೆಯಿಂದ ಸ್ವಾಮಿಗೆ ಸೂರ್ಯದೇವ ಪೂಜಿಸಿದ್ದನ್ನು ನಾವು ನೋಡಲು ಸಾಧ್ಯವಾಗಿಲ್ಲ. ಎಷ್ಟು ಹೊತ್ತು ಶಿವಲಿಂಗದ ಮೇಲೆ ಬೆಳಕು ಇರುತ್ತಿತ್ತೊ ಅದನ್ನು ಗಮನಿಸಿ ಭವಿಷ್ಯ ಹೇಳುತ್ತಿದ್ದೆವು. ಆದರೆ, ಪ್ರಕೃತಿ ವಿಕೋಪದಿಂದ ನಮಗೆ ಕಂಡಿಲ್ಲ. ಮಳೆ, ಬೆಳೆಯ ಸಮಸ್ಯೆ ಆಗುವುದಿಲ್ಲ. ಕೆಲವೆಡೆ ಅಲ್ಲಲ್ಲಿ ಜಲದ ತೊಂದರೆ ಆಗಬಹುದು. ಈ ಹಿಂದೆ 2021ರಲ್ಲಿ ಕೂಡ ಸೂರ್ಯರಶ್ಮಿ ಸ್ಪರ್ಶಿಸಿದ್ದು ಗೋಚರಿಸಿರಲಿಲ್ಲ. ಜನತೆಗೆ ಯಾವುದೇ ತೊಂದರೆ ಆಗಲ್ಲ, ಬುಧವಾರ ಶಾಂತಿ ಕೈಂಕರ್ಯ ನಡೆಸಲಾಗುವುದು ಎಂದು ತಿಳಿಸಿದರು.