ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾನಡ್ಕ ಕುಟುಂಬದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 10ನೇ ವರ್ಷದ ಕ್ರೀಡಾಕೂಟ ಸಂಭ್ರಮದಿಂದ ಇತ್ತೀಚೆಗೆ ನಡೆಯಿತು.ಮರಗೋಡಿನ ಕಾನಡ್ಕ ಕುಟುಂಬದ ಐನ್‌ಮನೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕ ಹೊಸ್ಕೇರಿ ಗ್ರಾಮದ ಕೆಂಜನ ಕೆಂಚಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ. ಅಲ್ಲದೆ ಕುಟುಂಬದಲ್ಲಿ ಒಗ್ಗಟ್ಟು, ಸಹಬಾಳ್ವೆ ನಡೆಸಲು ಸಹಕಾರಿಯಾಗಲಿದೆ ಎಂದರು.ಶಕ್ತಿ ದಿನಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಗೌಡ ಸಮುದಾಯ ಸಂಘಟಿತರಾಗಿ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕೆಂದು ಕರೆ ನೀಡಿದರು.
ಕ್ರೀಡೆ ಎಲ್ಲರನ್ನು ಒಗ್ಗೂಡಿಸುವುದಲ್ಲದೆ, ಸಂಘಟನೆಗೂ ಸಹಕಾರಿಯಾಗಲಿದೆ. ಎಲ್ಲಾ ಭಾಗದಲ್ಲ್ಲೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಮತ್ತು ಸಂಸ್ಕೃತಿ ಬೆಳೆಸಬೇಕು. ಅರೆಭಾಷಿಕ ಸಮುದಾಯದ ಸಂಸ್ಕೃತಿ, ಪದ್ಧತಿಯನ್ನು ಪೋಷಕರು ಮೊದಲು ತಿಳಿದುಕೊಂಡು ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯವಾಗಬೇಕು. ಜೀವನದಲ್ಲಿ ನೋವು-ನಲಿವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು.ಕುಟುಂಬದ ಹಿರಿಯರಾದ ಕಾನಡ್ಕ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಕಾನಡ್ಕ ಉಲ್ಲಾಸ್ ಹಾಜರಿದ್ದರು.
ಅತ್ಯಾಡಿ ಪ್ರೀತು ಪ್ರಾರ್ಥಿಸಿದರು. ಕಾನಡ್ಕ ಪ್ರಸಾದ್ ಸ್ವಾಗತಿಸಿದರು, ಕಾನಡ್ಕ ಹರೀಶ್ ನಿರೂಪಿಸಿದರು, ಕಾನಡ್ಕ ಚರಣ್ ಹಾಜರಿದ್ದರು.ಕಿರಿಯರು ಹಾಗೂ ಹಿರಿಯರಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ ರುಕ್ಮಿಣಿ ಓಟ, ರಾಮಸೀತೆ ಓಟ, ಬಾಲ್ ಬ್ಯಾಲೆನ್ಸ್ ಓಟ, ಹನುಮಂತನ ಓಟ, ಹಗ್ಗಜಗ್ಗಾಟ ಸೇರಿದಂತೆ ಸುಮಾರು 20 ರೀತಿಯ ಆಟೋಟದ ಸ್ಪರ್ಧೆಗಳನ್ನು ನಡೆಸಲಾಯಿತು. ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮಕ್ಕಳಿಗೆ ಹಿರಿಯರು ಹೇಳಿಕೊಡಬೇಕು. ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ದೂರದ ಊರುಗಳಲ್ಲಿ ನೆಲೆಸಿರುವ ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಲು ಅವಕಾಶ ದೊರೆತಂತ್ತಾಗುತ್ತದೆ ಎಂದು ಹೇಳಿದರು.ಕುಟುಂಬದ ಹಿರಿಯರಾದ ಕಾನಡ್ಕ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಗೋಡಿನ ಕಾಫಿ ಬೆಳೆಗಾರ ಮುಕ್ಕಾಟೀರ ಲೋಹಿತ್, ಮರಗೋಡು ಗ್ರಾ.ಪಂ ಸದಸ್ಯ ಪರಿಚನ ಶರತ್, ಕಾನಡ್ಕ ಉತ್ತಪ್ಪ ಇದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕುಟುಂಬದ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಕಾನಡ್ಕ ಪ್ರಸಾದ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು.