ಸಾರಾಂಶ
ಗಣೇಶ ಚತುರ್ಥಿ ಹಿನ್ನೆಲೆ ನಗರ ಸೇರಿದಂತೆ ಜಿಲ್ಲಾದ್ಯಂತ ಜನತೆ ಸಡಗರ ಸಂಭ್ರಮದಿಂದ ಲಂಭೋದರನನ್ನು ಶನಿವಾರ ಬರಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗಣೇಶ ಚತುರ್ಥಿ ಹಿನ್ನೆಲೆ ನಗರ ಸೇರಿದಂತೆ ಜಿಲ್ಲಾದ್ಯಂತ ಜನತೆ ಸಡಗರ ಸಂಭ್ರಮದಿಂದ ಲಂಭೋದರನನ್ನು ಶನಿವಾರ ಬರಮಾಡಿಕೊಂಡರು.ಬೆಳಗ್ಗೆಯಿಂದ ಶುರುವಾದ ಗಣೇಶೋತ್ಸವ ಸಂಭ್ರಮ ಸಂಜೆಯವರೆಗೂ ಮನೆ ಮಾಡಿತ್ತು. ಅದ್ಧೂರಿ ಮೆರವಣಿಗೆ ಮಧ್ಯೆ ಗಣನಾಯಕನನ್ನು ಸ್ವಾಗತಿಸಿದ ಜನತೆ ಗಣಪತಿ ಬಪ್ಪಾ ಮೊರಯಾ.. ಮಂಗಲ ಮೂರ್ತಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಡಿಜೆ, ಸೌಂಡ್ ಸಿಸ್ಚ್ಂ ಅಬ್ಬರದ ಮಧ್ಯೆ ಯುವ ಸಮುದಾಯ ಕುಣಿದು ಕುಪ್ಪಳಿಸುತ್ತ ಸಂಭ್ರಮದಿಂದ ಗಣಪನ ಮೆರವಣಿಗೆ ಮೂಲಕ ಕೊಂಡೊಯ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಪೂಜಿಸಿ ಮನೆಗೆ ಒಯ್ದರು. ಅದರಲ್ಲೂ ಗಣೇಶೋತ್ಸವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು ಅಕ್ಷರಶಃ ಜಾತ್ರೆಯಂತೆ ಗೋಚರಿಸಿದವು. ಎಲ್ಲಿ ನೋಡಿದ್ದಲ್ಲಿ ಗಣೇಶನ ನಾಮಜಪ ಕಂಡುಬಂತು.ಮಾರುಕಟ್ಟೆಯಲ್ಲಿ ಬಾಳೆ ಸಸಿ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ಜೋರಾಗಿತ್ತು. ಹೂವು ಹಣ್ಣು, ಅಲಂಕಾರಿಕ ವಸ್ತುಗಳು, ಗಣೇಶನ ಮೂರ್ತಿಗಳು, ತರಕಾರಿ, ಸಿಹಿತಿನಿಸುಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಡಿಜೆ ಸೌಂಡ್ ಸಿಸ್ಟ್ಂ ಹಾಡಿಗೆ ಹೆಜ್ಜೆ ಹಾಕುತ್ತ ಕುಣಿದುಕುಪ್ಪಳಿಸಿದರು. ನೂರಾರು ಯುವಕ, ಯುವತಿಯರು ಸೌಂಡ್‌ಗೆ ಹೆಜ್ಜೆ ಹಾಕಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.