ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಧಕರಿಂದ ಸ್ಫೂರ್ತಿಗೊಂಡು ಸಮಾಜಕ್ಕೆ ಅನುಕರಣೀಯವಾಗುವ ಭವ್ಯ ಸಾಧನೆ ಮಾಡಬೇಕು. ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯಾಗಲಿ ಅಥವಾ ಶೈಕ್ಷಣಿಕ ಪರೀಕ್ಷೆಯೇ ಆಗಲಿ ನಿರಂತರ ಪ್ರಯತ್ನದಿಂದ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಯುಪಿಎಸ್ಸಿ ಟಾಪರ್ ಸಂತೋಷ ಶಿರಾಡೋಣ ಹೇಳಿದರು.ನಗರದ ಕೆಎಸ್‌ಆರ್‌ಟಿಸಿ ಕಾಲೋನಿಯ, ಎಕ್ಸ್‌ಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸೇತುಬಂಧ (ಬ್ರಿಜ್‌ಕೋರ್ಸ್) ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪಿಯು ಶಿಕ್ಷಣ ತುಂಬ ಮುಖ್ಯ ಹಂತ. ಹತ್ತನೇ ತರಗತಿಯವರೆಗೆ ಒಂದು ಲೆಕ್ಕವಾದರೆ, ಹತ್ತರ ನಂತರ ಇನ್ನೊಂದು ಲೆಕ್ಕ. ಉತ್ತಮ ಧ್ಯೇಯ, ಸಮರ್ಥ ಗುರುಗಳ ಮಾರ್ಗದರ್ಶನ ಹಾಗೂ ಕಲಿಕಾ ಸ್ನೇಹಿ ವಾತಾವರಣವಿದ್ದರೆ ಬೇಗ ಗುರಿ ತಲುಪಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ರ‍್ಯಾಂಕ್ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಎಕ್ಸಲಂಟ್ ಕಾಲೇಜಿನ ಸೇವೆ ಅನುಕರಣೀಯ. ನಾನೂ ಇದೇ ಸಂಸ್ಥೆಯಲ್ಲಿ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಸೈನಿಕ, ನವೋದಯ ಪರೀಕ್ಷೆಗಳಿಗಾಗಿ ಕೋಚಿಂಗ್ ಪಡೆದಿರುವುದಾಗಿ ತಿಳಿಸಿದರು.
ಎಕ್ಸಲಂಟ್ ಕಾಲೇಜಿನ 2018ನೇ ಸಾಲಿನ ನೀಟ್, ಕೆ-ಸೆಟ್ ಪರೀಕ್ಷೆಯ ಪ್ರಥಮ ರ‍್ಯಾಂಕ್ ವಿಜೇತ ಹಾಗೂ ಪ್ರಸ್ತುತ ಎಂಬಿಬಿಎಸ್‌ನಲ್ಲಿ ಬಂಗಾರ ಪದಕ ಪುರಸ್ಕೃತ ಡಾ.ಶ್ರೀಧರ ದೊಡಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಬೇಕಾದರೆ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಮ್ಮ ಪ್ರಯತ್ನ ಪ್ರಾರಂಭವಾಗಬೇಕು. ಬೋರ್ಡ್ ಪರೀಕ್ಷೆಗಳ ತಯಾರಿಯೊಂದಿಗೆ ಜೆಇಇ, ಕೆ-ಸೆಟ್, ನೀಟ್ ಮುಂತಾದ ವೃತ್ತಿಪರ ಕೋರ್ಸ್‌ಗಳ ತಯಾರಿ ಕೂಡ ಮಾಡಬೇಕು. ಎನ್‌ಸಿಇಆರ್‌ಟಿ ಪಠ್ಯ ರಾಷ್ಟ್ರಮಟ್ಟದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ತಯಾಗಿರುತ್ತದೆ. ಮೇಲ್ನೋಟಕ್ಕೆ ಕಠಿಣವೆನಿಸಿದರೂ ಗುರುಗಳ ಮಾರ್ಗದರ್ಶನದಿಂದ ಅರ್ಥೈಸಿಕೊಂಡರೆ ಕಷ್ಟವಾಗದು. ನನ್ನ ಕನಸನ್ನು ನನಸಾಗಿಸಲು ಸುವರ್ಣಾವಕಾಶ ನೀಡಿದ ಎಕ್ಸಲಂಟ್ ಕಾಲೇಜಿನ ಮಾರ್ಗದರ್ಶನ ಮರೆಯಲಾರೆ. ಎಲ್ಲರ ಭವಿಷ್ಯ ಕೂಡ ಈಡೇರಲಿ ಎಂದು ಶುಭ ಹಾರೈಸಿದರು.ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಯುಪಿಎಸ್‌ಸಿಯಲ್ಲಿ ರ‍್ಯಾಂಕ್ ಬರುವುದು ಸುಲಭವಲ್ಲ. ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಉತ್ತಮ ರ‍್ಯಾಂಕ್ ನೀಡಿದ ಸಂತೋಷ ಶಿರಾಡೋಣ ಹಾಗೂ ಎಂಬಿಬಿಎಸ್‌ನಲ್ಲಿ ಬಂಗಾರದ ಪದಕ ಪಡೆದ ಶ್ರೀಧರ ದೊಡಮನಿ ಇವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಅನುಕರಣೀಯ. ಪ್ರತಿಭೆ ಅನಾವರಣಗೊಳಿಸುವ ಜವಾಬ್ದಾರಿ ಶಾಲಾ ಕಾಲೇಜುಗಳ ಮೇಲಿದೆ. ಸಂತೋಷ ಶಿರಾಡೋಣ ನಮ್ಮ ಸಂಸ್ಥೆಯಲ್ಲಿ ಪ್ರಾಥಮಿಕ ಹಂತದ ಕೋಚಿಂಗ್ ಪಡೆದ ವಿದ್ಯಾರ್ಥಿಯಾದರೆ ಶ್ರೀಧರ ದೊಡಮನಿ ನಮ್ಮಲ್ಲಿ ಕೋಚಿಂಗ್ ಪಡೆದು, ಪಿಯುಸಿವರೆಗೆ ಓದಿ ಐತಿಹಾಸಿಕ ಸಾಧನೆಗೈದ ವಿದ್ಯಾರ್ಥಿ. ಈ ಇಬ್ಬರು ಸಾಧಕ ರತ್ನಗಳು, ನಮ್ಮ ಸಂಸ್ಥೆಯ ಹೆಮ್ಮೆ ಎಂದರು.
ಸನ್ಮಾನ ಸ್ವೀಕರಿಸಿದ ಸಾಧಕರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಆಕಾಂಕ್ಷಾ.ಬಿ ಪ್ರಾರ್ಥಿಸಿದಳು. ಉಪನ್ಯಾಸಕಿ ಶ್ರದ್ಧಾ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಎಂ.ಎಂ.ಮಲಘಾಣ ನಿರೂಪಿಸಿದರು. ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ವಂದಿಸಿದರು.