ಜಿಗಜಿಣಗಿಗೆ ಎರಡನೇ ಪಟ್ಟಿಯಲ್ಲಿ ಸಿಗುತ್ತಾ ಅವಕಾಶ?

| Published : Jun 10 2024, 12:46 AM IST

ಸಾರಾಂಶ

ಚಿಕ್ಕೋಡಿ, ವಿಜಯಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟು ಏಳು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿಗೂ ಸಿಗಲಿಲ್ಲ ಕೇಂದ್ರ ಸಚಿವ ಸ್ಥಾನ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಜಿಗಜಿಣಗಿ ಅವರು ಏಳುಬಾರಿ ಸಂಸದರಾಗುವ ಮೂಲಕ ದಾಖಲೆ ಮಾಡಿದ್ದಾರೆ. ರಾಜ್ಯದಲ್ಲೇ ಪ್ರಮುಖ ಪಕ್ಷದಲ್ಲಿ ಹಿರಿತನ ಹೊಂದಿರುವ ಏಕೈಕ ಸಂಸದ. ಆದರೆ, ಆ ನಾಯಕನಿಗೆ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಸಿಕ್ಕಿಲ್ಲ. ಪಕ್ಷದ ಹಿರಿಯ ನಾಯಕ ಸಂಸದ ರಮೇಶ ಜಿಗಜಿಣಗಿಗೆ ಮೊದಲ‌ ಹಂತದಲ್ಲಿ ಕೇಂದ್ರದಲ್ಲಿ ಸಂಪುಟ ದರ್ಜೆಯ ಸ್ಥಾನ ಸಿಕ್ಕಿಲ್ಲ. ಆದರೆ ದ್ವಿತೀಯ ಹಂತದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯನ್ನು ಸಂಸದ ಜಿಗಜಿಣಗಿ ಹೊಂದಿದ್ದಾರೆ. ಕಾರಣ, ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಯ ರಾಜ್ಯ ದರ್ಜೆಯ ಸಚಿವ ಸ್ಥಾನದ ಅವಕಾಶ ಪಡೆದಿದ್ದರು. ಹಾಗಾಗಿ ಮೊದಲ ಹಂತದ ಸಂಪುಟ ದರ್ಜೆಯ ಅವಕಾಶ ಸಿಗದಿದ್ದರೂ ರಾಜ್ಯ ಖಾತೆಗಳು ಅಥವಾ ಸಹಾಯಕ ಖಾತೆಗಳ ಹಂಚಿಕೆ ವೇಳೆ ಸಚಿವ ಸ್ಥಾನ ಸಿಗಲಿದೆಯಾ ಎಂಬ ನಿರೀಕ್ಷೆ ಇದೆ.

ಸೆಕೆಂಡ್ ಚಾನ್ಸ್‌ನಲ್ಲಿ ಮಂತ್ರಿಗಿರಿ ಫಿಕ್ಸ್?:

ರಾಜ್ಯದಲ್ಲಿಯೇ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡಿರುವ ರಮೇಶ ಜಿಗಜಿಣಗಿಗೆ ಎರಡನೇ ಅವಧಿಯಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ದೆಹಲಿಯ ಹಿರಿಯರು 2ನೇ ಹಂತದಲ್ಲಿ ಅವಕಾಶ ಕೊಡಿಸುವ ಭರವಸೆ ಕೊಟ್ಟಿದ್ದಾರೆ. ಸಾಕಷ್ಟು ಅನುಭವ ಇರುವ ರಮೇಶ ಜಿಗಜಿಣಗಿ ತಮಗೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂಬ ನಿರೀಕ್ಷೆ ಮೇರೆಗೆ ಈಗಾಗಲೇ ಇವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಹೇಗಾದರೂ ಮಾಡಿ ಸಚಿವನಾಗಿಯೇ ಬರಬೇಕು ಎಂಬ ಉತ್ಸಾಹ ಅವರಲ್ಲಿದೆ.

ಕೈ ಹಿಡಿಯುತ್ತಾ ದಲಿತ ಕೋಟಾ?:

ಜಾತಿ ಲೆಕ್ಕಾಚಾರದಲ್ಲಿ ರಾಜ್ಯದಿಂದ ವಿವಿಧ ಸಮುದಾಯಗಳಿಗೆ ಅವಕಾಶ ಸಿಕ್ಕಿದೆ. ಆದರೆ ದಲಿತ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ಎರಡನೇ ಹಂತದಲ್ಲಿ ದಲಿತ ಕೋಟಾಕ್ಕೆ ಅವಕಾಶ ಸಿಗುವ ಸಂಭವ ಹೆಚ್ಚಾಗಿದೆ. ಅದು ಜಿಗಜಿಣಗಿ ಪಾಲಾಗಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಗೃಹ ಇಲಾಖೆ, ಅಬಕಾರಿ, ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಅಲ್ಲದೆ ಕಳೆದ ಅವಧಿಯಲ್ಲಿ ಕೇಂದ್ರದಲ್ಲೂ ರಾಜ್ಯ ಖಾತೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ರಾಜ್ಯದಲ್ಲಿ ಹಿರಿಯ ನಾಯಕ ಎನಿಸಿಕೊಂಡಿರುವ ಜಿಗಜಿಣಗಿ ಜೊತೆಗೆ ಇನ್ನೂ ಹಲವು ಹಿರಿಯರು ಹಾಗೂ ಅನುಭವಿಗಳಿದ್ದು, ಎರಡನೇ ಅವಧಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸರತಿಯಲ್ಲಿದ್ದಾರೆ. ರಾಜ್ಯಕ್ಕೆ ಇನ್ನೂ ಎಷ್ಟು ಸ್ಥಾನಗಳು ಸಿಗುತ್ತವೆ? ಯಾರ್‍ಯಾರಿಗೆ ಅವಕಾಶ ಸಿಗಲಿದೆ ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ. ಆದರೆ ಅನೇಕ ಹಿರಿಯ ಸಂಸದರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವದಂತು ಸುಳ್ಳಲ್ಲ.

ಮುಖ್ಯ ಹುದ್ದೆಗಳಿಗೆ ಪ್ರಮಾಣ:

ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ನರೇಂದ್ರ ಮೋದಿ ಅವರು ಸೇರಿದಂತೆ 48 ಸಂಸದರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಕೇಂದ್ರದಲ್ಲಿ ಮುಖ್ಯ ಹುದ್ದೆಗಳಿಗೆ ಮಾತ್ರ ಪ್ರಮಾಣವಚನ ನಡೆದಿರುವುದರಿಂದ ನಂತರದಲ್ಲಿ ಉಳಿದ ರಾಜ್ಯ ಖಾತೆ ಹುದ್ದೆಗಳಿಗೆ ಸಚಿವರ ಆಯ್ಕೆ ನಡೆಯಲಿದೆ. ಈ ವೇಳೆ ವಿಜಯಪುರ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸತತ ನಾಲ್ಕುಬಾರಿ ಗೆದ್ದಿರುವ ರಮೇಶ ಜಿಗಜಿಣಗಿ ಅವರಿಗೂ ರಾಜ್ಯ ಖಾತೆ ಸಚಿವ ಸ್ಥಾನ ಸಿಗುವ ಅವಕಾಶ ಇದೆ ಎನ್ನಲಾಗುತ್ತಿದೆ.

--------- ಮೂರು ಬಾರಿ ಶಾಸಕ, ಏಳುಬಾರಿ ಸಂಸದನಾಗಿ ಆಯ್ಕೆಯಾಗುವ ಮೂಲಕ ನಾಲ್ಕೂವರೆ ದಶಕಗಳ ಕಾಲ ರಾಜಕೀಯದಲ್ಲಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವನಾಗಿರುವ ಅನುಭವವಿದೆ. ಪಕ್ಷದಲ್ಲಿ ನಾನು ಹಿರಿಯ ಸಂಸದನಾಗಿದ್ದೇನೆ. ಪಕ್ಷದಲ್ಲಿ ನನಗೆ ಅನ್ಯಾಯ ಆಗೋದಿಲ್ಲ, ಈ ಬಾರಿಯೂ ನರೇಂದ್ರ ಮೋದಿ ಅವರು ಖಂಡಿತವಾಗಿ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಮೊದಲ ಹಂತ ಮಿಸ್ಸಾದರೂ ಎರಡನೇ ಹಂತದಲ್ಲಿ ನನಗೆ ಅವಕಾಶ ಸಿಗಲಿದೆ.

- ರಮೇಶ ಜಿಗಜಿಣಗಿ, ಹಿರಿಯ ಸಂಸದ.