ರಾಷ್ಟ್ರಕ್ಕೆ ಪ್ರಬಲ ಪಿಡುಗಾಗಿರುವ ಬಾಲ್ಯ ವಿವಾಹ ಪದ್ಧತಿಗೆ ಅನಕ್ಷರತೆ, ಅರಿವಿನ ಕೊರತೆ ಅಥವಾ ಮೂಡನಂಬಿಕೆ ಕಾರಣ, ಮಕ್ಕಳ ಕಲಿಕೆ ಹಂತದಲ್ಲಿ ಅವರ ಬಾಲ್ಯವನ್ನು ಮತ್ತು ಬದುಕನ್ನು ಕಿತ್ತುಕೊಳ್ಳುವುದು ಅಪರಾಧ. ಈ ವಿಚಾರದಲ್ಲಿ ತಂದೆ, ತಾಯಿಗಳ ಜೊತೆಗೆ ಸಾರ್ವಜನಿಕರ ಹೊಣೆಗಾರಿಕೆಯೂ ಸಹ ಇದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಬಾಲ್ಯ ವಿವಾಹ ಮುಕ್ತ ಮಂಡ್ಯ ಜಿಲ್ಲೆಯಾಗಿ ಮಾಡುವಲ್ಲಿ ಸರ್ವರ ಸಂಕಲ್ಪ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಬುಧವಾರ ಹೇಳಿದರು.

ಪಟ್ಟಣದ ಶ್ರೀಉಗ್ರ ನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರಕ್ಕೆ ಪ್ರಬಲ ಪಿಡುಗಾಗಿರುವ ಬಾಲ್ಯ ವಿವಾಹ ಪದ್ಧತಿಗೆ ಅನಕ್ಷರತೆ, ಅರಿವಿನ ಕೊರತೆ ಅಥವಾ ಮೂಡನಂಬಿಕೆ ಕಾರಣ, ಮಕ್ಕಳ ಕಲಿಕೆ ಹಂತದಲ್ಲಿ ಅವರ ಬಾಲ್ಯವನ್ನು ಮತ್ತು ಬದುಕನ್ನು ಕಿತ್ತುಕೊಳ್ಳುವುದು ಅಪರಾಧ. ಈ ವಿಚಾರದಲ್ಲಿ ತಂದೆ, ತಾಯಿಗಳ ಜೊತೆಗೆ ಸಾರ್ವಜನಿಕರ ಹೊಣೆಗಾರಿಕೆಯೂ ಸಹ ಇದೇ ಎಂದರು.

ತಮ್ಮ ಮಕ್ಕಳನ್ನು ಶೀಘ್ರವಾಗಿ ವಿವಾಹ ಮಾಡಿ ಜವಾಬ್ದಾರಿ ಕಡಿಮೆ ಮಾಡಿಕೊಳ್ಳುವ ದಾವಂತದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಸದೃಢ ಬದುಕನ್ನು ನಾಶ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಈ ವರ್ಷ ಕೇವಲ 14 ಬಾಲ್ಯ ವಿವಾಹ ಪ್ರಕರಣ ಪತ್ತೆಯಾಗಿವೆ. ಇಂತಹ ಪ್ರಕರಣಗಳನ್ನು ಸಂಪೂರ್ಣ ತೊಡೆದು ಹಾಕಲು ಸರ್ಕಾರ ಮತ್ತು ಸಾಮಾಜಿಕ ಸೇವಾ ಸಂಸ್ಥೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಮಂಡ್ಯ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ರಾಧಾ ಎಂ.ಎಸ್.ಹರಿಣಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ, ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶ್ರೀನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಪ್ರಾರಂಭವಾದ ಬಾಲ್ಯ ವಿವಾಹ ವಿರೋಧಿ ಬೃಹತ್ ಜನಜಾಗೃತಿ ಜಾಥ ದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳು ಪಾಲ್ಗೊಂಡು ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ಪದ್ಧತಿ ನಿಷೇಧ ಕುರಿತಂತೆ ಜಾಗೃತಿ ಮೂಡಿಸಿದರು.