ಕಬ್ಬು ತುಂಬಿದ ಟ್ರೈಲರ್ ಉರುಳಿ ಬಿದ್ದು ಮಗು ಸಾವು

| Published : Oct 06 2024, 01:27 AM IST

ಸಾರಾಂಶ

ಮಹಾರಾಷ್ಟ್ರದಿಂದ ತಮ್ಮ ಕುಟುಂಬ ಸಮೇತ ಕಬ್ಬು ಕಟಾವು ಕೆಲಸಕ್ಕೆ ಕೂಲಿ ಕಾರ್ಮಿಕರು ಬಂದಿದ್ದರು.

ಕಿಕ್ಕೇರಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ನ ಟ್ರೈಲರ್ ತುಂಡಾಗಿ ಮಗುಚಿ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಕೋಡಿಮಾರನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ರೋಷಿನಿ(6) ಸಾವನ್ನಪ್ಪಿದ ಮಗು. ಟ್ರ್ಯಾಕ್ಟರ್ ನ ಟ್ರೈಲರ್ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ ಮನೆ ಬಳಿ ಟ್ರೈಲರ್ ತುಂಡಾಗಿ ಮಗುಚಿ ರಸ್ತೆ ಬದಿಗೆ ಬಿದ್ದಿದೆ. ಈ ವೇಳೆ ಆಟವಾಡುತ್ತಿದ್ದ ಮಗು ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಮಹಾರಾಷ್ಟ್ರದಿಂದ ತಮ್ಮ ಕುಟುಂಬ ಸಮೇತ ಕಬ್ಬು ಕಟಾವು ಕೆಲಸಕ್ಕೆ ಕೂಲಿ ಕಾರ್ಮಿಕರು ಬಂದಿದ್ದರು. ಇವರ ಮಗು ರಸ್ತೆ ಬದಿಯಲ್ಲಿ ಆಟವಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜೆಸಿಬಿ ಯಂತ್ರ ತರಿಸಿ ಕಬ್ಬನ್ನು ಪಕ್ಕಕ್ಕೆ ಸರಿಸಿ ಟ್ರೈಲರ್ ಮೇಲೆತ್ತಿ ಮಗುವಿನ ಶವ ಹೊರ ತೆಗೆಯಲಾಯಿತು. ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.