ಮಕ್ಕಳ ಉದ್ಯಾನವನಕ್ಕೆ ಬೇಕಿದೆ ಕಾಯಕಲ್ಪ

| Published : Dec 10 2024, 12:30 AM IST

ಸಾರಾಂಶ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್‌ ಜಲಾಶಯದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ ಕಳೆದ 15 ವರ್ಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿದ್ದು, ಉದ್ಯಾನವನಕ್ಕೆ ಸೂಕ್ತ ಕಾಯಕಲ್ಪ ಬೇಕಿದೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್‌ ಜಲಾಶಯದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ ಕಳೆದ 15 ವರ್ಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿದ್ದು, ಉದ್ಯಾನವನಕ್ಕೆ ಸೂಕ್ತ ಕಾಯಕಲ್ಪ ಬೇಕಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿಡಕಲ್‌ ಜಲಾಶಯದಲ್ಲಿ ಬರುವ ಈ ಉದ್ಯಾನವನವು ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿದ್ದು, ದನಕರುಗಳ ಹಾವಳಿಗೆ ತುತ್ತಾಗಿದೆ.

ಈಗಾಗಲೇ ಹಿಡಕಲ್‌ ಜಲಾಶಯದ ಮುಂಭಾಗದಲ್ಲಿ ಬೃಂದಾವನ ಮಾದರಿಯ ಕೆಲವು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಅದರ ಜತೆಗೆ ಈ ಮಕ್ಕಳ ಉದ್ಯಾನವನ್ನೂ ಕೂಡ ಅಭಿವೃದ್ಧಿ ಪಡಿಸಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂಬುವುದು ಸ್ಥಳೀಯರ ಅಭಿಪ್ರಾಯ.

ಮೊದಲು ಸದರಿ ಮಕ್ಕಳ ಉದ್ಯಾನವನಕ್ಕೆ ವಿವಿಧ ಭಾಗಗಳಿಂದ ಪ್ರವಾಸಿಗರು ವಾರಾಂತ್ಯದ ದಿನಗಳಲ್ಲಿ, ಸಾರ್ವಜನಿಕ ರಜಾದಿನಗಳಲ್ಲಿ ಹಾಗೂ ರಾಷ್ಟ್ರೀಯ ಹಬ್ಬಹರಿದಿನಗಳಲ್ಲಿ ತಮ್ಮ ಮಕ್ಕಳೊಂದಿಗೆ ಆಗಮಿಸಿ ವಿವಿಧ ಭಾರತೀಯ ಸಾಂಸ್ಕೃತಿಕ ಪರಂಪರೆಯ ಆಟಗಳನ್ನು ಆಡಿಸುತ್ತಾ ರಜೆಯ ಮೋಜು ಸವಿಯುತ್ತಿದ್ದರು. ಆದರೆ, ಪ್ರಸ್ತುತ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದು ಸ್ಥಳೀಯ ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಿ ಈ ಉದ್ಯಾನವನಕ್ಕೆ ಹೊಸ ಸ್ಪರ್ಶ ನೀಡಬೇಕಾಗಿದೆ.

ಈ ಭಾಗದಲ್ಲಿ ಮಕ್ಕಳ ಉದ್ಯಾನವನ್ನು ಅಭಿವೃದ್ಧಿ ಪಡಿಸುವುದರಿಂದ ಹಿಡಕಲ್‌ ಜಲಾಶಯವು ತಾಣವಾಗಿ ಹೊರಹೊಮ್ಮುತ್ತದೆ.

-ಎಸ್.ಕೆ.ಸಣ್ಣಕ್ಕಿ, ಸ್ಥಳೀಯ ಉಪನ್ಯಾಸಕರು.