ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಸುಗಮ

| Published : Jun 04 2024, 12:30 AM IST

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಸುಗಮ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ 12 ಹಾಗೂ ತಾಲೂಕು ಕೇಂದ್ರಗಳ 8 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿದ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ತಮ್ಮ ಹಕ್ಕು ಚಲಾಯಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನವು ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಸೋಮವಾರ ಸುಗಮವಾಗಿ ಜರುಗಿತು.

ನಗರದ 12 ಹಾಗೂ ತಾಲೂಕು ಕೇಂದ್ರಗಳ 8 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿದ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ತಮ್ಮ ಹಕ್ಕು ಚಲಾಯಿಸಿದರು. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಸೇರಿದಂತೆ 11 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದು, ಮತ ಎಣಿಕೆ ಕಾರ್ಯವು ಜೂನ್ 6 ರಂದು ನಡೆಯಲಿದೆ.

ಮೈಸೂರು ತಾಲೂಕಿನ 4 ಮತಗಟ್ಟೆ ಕೇಂದ್ರಗಳು ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರ, ಶಾರದಾದೇವಿನಗರದ ಇಂದಿರಾ ಪ್ರೌಢಶಾಲೆ ಹಾಗೂ ಡಿ.ಇಡಿ ಕಾಲೇಜು, ನಜರಾಬಾದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಇದ್ದವು. ಕುವೆಂಪುನಗರದ ಕಾಗಿನೆಲೆ ಬಿ.ಇಡಿ ಕಾಲೇಜು, ಗೋಕುಲಂನ ಲಯನ್ಸ್ ಸೇವಾನಿಕೇತನ ಶಾಲೆ ಸೇರಿದಂತೆ ಜಿಲ್ಲೆಯ ಎಲ್ಲಾ 20 ಕೇಂದ್ರಗಳಲ್ಲಿ ಸಂಜೆ 4 ರವರೆಗೆ ಮತದಾನ ಜರುಗಿತು.

ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ಮತಚಲಾಯಿಸಿದರು. ಕ್ಷೇತ್ರ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಒಟ್ಟು 44 ಮತಗಟ್ಟೆ ಸ್ಥಾಪಿಸಲಾಗಿತ್ತು.

ಎಲ್ಲಾ ಮತಗಟ್ಟೆ ಕೇಂದ್ರದ ಸಮೀಪ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು, ಪಕ್ಷದ ಅಭ್ಯರ್ಥಿ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗೆ ನೀಡುವಂತೆ ಕೋರಿದರು. ರಾಮಕೃಷ್ಣ ವಿದ್ಯಾಕೇಂದ್ರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಅವರು ಮತಯಾಚಿಸಿದರು. ಬಲಗೈ ತೋರು ಬೆರಳಿಗೆ ಶಾಹಿ ಗುರುತನ್ನು ಹಾಕಲಾಗಿತ್ತು. ಹಕ್ಕು ಚಲಾಯಿಸಿದ ನಂತರ ಸೆಲ್ಫಿ ತೆಗೆದುಕೊಂಡ ಶಿಕ್ಷಕರು ಸಂಭ್ರಮಿಸಿದರು.

ಮತಗಟ್ಟೆಗೆ ಯದುವೀರ್ ಭೇಟಿ

ಕುವೆಂಪುನಗದರ ಕಾಗಿನೆಲೆ ಕನಕಗುರುಪೀಠ ಶಿಕ್ಷಣ ಕಾಲೇಜಿನ ಮತಗಟ್ಟೆ ಬಳಿ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮತ ಚಲಾಯಿಸಲು ಹೋಗುತ್ತಿದ್ದವರಿಗೆ ಭಿತ್ತಿ ಪತ್ರ ನೀಡಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರವಾಗಿ ಮತಯಾಚಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಹೇಮಂತ್ ಕುಮಾರ್ ಗೌಡ, ಅಪ್ಪಣ್ಣ ಹಾಜರಿದ್ದರು.

ಮತ್ತೊಂದೆಡೆ ಪೆಂಡಾಲ್ ನಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರವಾಗಿ ಮತಯಾಚಿಸಿದರು. ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಪಾಲಿಕೆ ಮಾಜಿ ಸದಸ್ಯರಾದ ಜೆ. ಗೋಪಿ, ಕೆಂಪಣ್ಣ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮೊದಲಾದವರು ಇದ್ದರು.