ಧಾರವಾಡ:

ಪಾರ್ಕಿಂಗ್‌ಗೆ ಜಾಗೆ ಬಿಡದೇ ನಿರ್ಮಿಸಿಕೊಂಡಿರುವ 5 ವರ್ಷದೊಳಗಿನ ಮಾಲ್‌, ಕಲ್ಯಾಣ ಮಂಟಪ, ಅಪಾರ್ಟ್‌ಮೆಂಟ್‌ ಸೇರಿದಂತೆ ವಾಣಿಜ್ಯ ಕಟ್ಟಡ ನೆಲಸಮ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ. ಈ ಮೂಲಕ ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರಿಗೆ ಶಾಕ್‌ ನೀಡಿದೆ.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾರ್ಕಿಂಗ್‌ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ನಮ್ಮಿಂದ ಕಟ್ಟಡ ಪರವಾನಗಿ ಪಡೆಯುತ್ತಾರೆ. ಆದರೆ, ಯಾರೊಬ್ಬರು ನಿಯಮದಂತೆ ನಿರ್ಮಿಸಿಕೊಳ್ಳುವುದಿಲ್ಲ. ಎಷ್ಟೋ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲ. ಮಾಲ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದಾಗಿ ವಾಹನಗಳೆಲ್ಲ ರಸ್ತೆ ಮೇಲೆ ನಿಲುಗಡೆ ಮಾಡುವುದು ಅನಿವಾರ್ಯವಾಗುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಹೊಡೆತ ಬೀಳುತ್ತದೆ ಎಂದು ಸದಸ್ಯರು ಗಮನ ಸೆಳೆದರು.

ಸದಸ್ಯ ತಿಪ್ಪಣ್ಣ ಮಜ್ಜಗಿ, ಎಷ್ಟೋ ಕಟ್ಟಡಗಳು ನಿಯಮ ಉಲ್ಲಂಘಿಸಿಯೂ ಪಾಲಿಕೆಯಿಂದ ಸಿಸಿ ಪಡೆದುಕೊಳ್ಳುತ್ತವೆ. ರಸ್ತೆಗಳೆಲ್ಲ ಇಕ್ಕಟ್ಟಾಗಿವೆ. ಅವುಗಳಲ್ಲೇ ವಾಹನಗಳನ್ನು ಪಾರ್ಕ್‌ ಮಾಡಿ ಹೋಗುತ್ತಾರೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗುತ್ತಿದೆ ಎಂದರು. ಇದಕ್ಕೆ ರಾಧಾಬಾಯಿ ಸಫಾರೆ, ಇಕ್ಬಾಲ್‌ ನವಲೂರು, ರಾಜಶೇಖರ ಕಮತಿ ಸೇರಿದಂತೆ ಎಲ್ಲರೂ ಧ್ವನಿ ಗೂಡಿಸಿದರು.


ಮೇಯರ್‌ ಜ್ಯೋತಿ ಪಾಟೀಲ, 5 ವರ್ಷದೊಳಗೆ ನಿರ್ಮಾಣವಾಗಿರುವ ಕಲ್ಯಾಣ ಮಂಟಪ, ಅಪಾರ್ಟ್‌ಮೆಂಟ್‌, ಮಾಲ್‌ ಸೇರಿದಂತೆ ಎಲ್ಲ ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಬೇಕು. ಯಾವ ಕಟ್ಟಡ ಪಾರ್ಕಿಂಗ್‌ಗೆ ಜಾಗೆ ಬಿಡದೇ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆಯೋ? ಅವುಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಬೇಕು. ಜತೆಗೆ ನೆಲಸಮ ಮಾಡಬೇಕು ಎಂದು ಆದೇಶಿಸಿದರು.

ಸದನ ಸಮಿತಿ ರಚನೆ:

ಧಾರವಾಡದಲ್ಲಿನ ಹೆರಿಗೆ ಆಸ್ಪತ್ರೆ ಅಭಿವೃದ್ಧಿ ಕುರಿತಂತೆ ಪರಿಶೀಲಿಸಲು ಸದನ ಸಮತಿ ರಚಿಸಲು ಪಾಲಿಕೆ ನಿರ್ಣಯ ಕೈಗೊಂಡಿತು. ಸಭೆಯಲ್ಲಿ ಗಮನ ಸೆಳೆದ ಸದಸ್ಯೆ ಕವಿತಾ ಕಬ್ಬೇರ, ಧಾರವಾಡ ಹೆರಿಗೆ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದೆ ಎಂದು ಬಂದ್‌ ಮಾಡಲಾಗಿದೆ. ಅದರ ಅಭಿವೃದ್ಧಿಗೆ ಪಾಲಿಕೆಯ ಬಜೆಟ್‌ನಲ್ಲಿ ಅನುದಾನವನ್ನಾದರೂ ನೀಡಬೇಕು. ಸ್ಥಳೀಯ ಶಾಸಕರ ಅನುದಾನವನ್ನಾದರೂ ಪಡೆದು ಅಭಿವೃದ್ಧಿ ಪಡಿಸಬೇಕು ಎಂದರು. ಇದಕ್ಕೆ ರಾಜಶೇಖರ್‌ ಕಮತಿ ಧ್ವನಿಗೂಡಿಸಿದರು.

ಆಗ ಮಧ್ಯಪ್ರವೇಶಿಸಿದ ಸಭಾನಾಯಕ ಈರೇಶ ಅಂಚಟಗೇರಿ, ಹಳೇಹುಬ್ಬಳ್ಳಿಯಲ್ಲಿನ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಪ್ರಸ್ತಾವನೆಯನ್ನು ಕಬ್ಬೇರ ಅವರೇ ತಂದಿದ್ದರು. ಅದನ್ನು ಹಸ್ತಾಂತರಿಸಲಾಗಿದೆ. ನಾವು ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇದೀಗ ಧಾರವಾಡ ಆಸ್ಪತ್ರೆಯೂ ಅದೇ ರೀತಿ ಆಗಬಾರದು. ಇಲ್ಲಿನ ಆಸ್ಪತ್ರೆ ಅಭಿವೃದ್ಧಿ ಪಡಿಸಿದರೆ ಮುಂದೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದಿಲ್ಲ ಎಂದು ನಿರ್ಣಯ ಕೈಗೊಂಡು ಅಭಿವೃದ್ಧಿಗೆ ಯೋಚನೆ ಮಾಡಬೇಕು ಎಂದರು.

ಮೇಯರ್‌ ಜ್ಯೋತಿ ಪಾಟೀಲ, ಧಾರವಾಡ ಹೆರಿಗೆ ಆಸ್ಪತ್ರೆ ಯಾವ ರೀತಿ ಅಭಿವೃದ್ಧಿಪಡಿಸಬೇಕು. ಶಾಸಕರ ಅನುದಾನ ಬಳಕೆ, ಆರೋಗ್ಯ ಇಲಾಖೆಗೆ ಕೊಡಬೇಕೋ ಎಂಬುದನ್ನು ನಿರ್ಧರಿಸಲು ಸದನ ಸಮಿತಿ ರಚಿಸಲಾಗುವುದು. ಅದು ವರದಿ ಕೊಟ್ಟ ಬಳಿಕ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ರೂಲಿಂಗ್‌ ನೀಡಿದರು.

ಇದೇ ವೇಳೆ ರಾಜಶೇಖರ್‌ ಕಮತಿ, ಸಿವಿಲ್‌ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಭೆ ಗಮನ ಸೆಳೆದರು. ಅದಕ್ಕೆ ಮೇಯರ್‌ ಆಸ್ಪತ್ರೆ, ಶಾಲೆಗಳಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸರ್ಕಾರಿ ಕಟ್ಟಡಗಳು ಪಾಲಿಕೆ ಅನುಮತಿ ಪಡೆಯಲ್ಲ: ಘಾಳಿ

ಸರ್ಕಾರಿ ಕಟ್ಟಡಗಳು ಕಟ್ಟಡ ಪರವಾನಗಿ ಪಡೆಯುವುದೇ ಇಲ್ಲ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಸಭೆಯಲ್ಲಿ ಸದಸ್ಯ ಈರೇಶ ಅಂಚಟಗೇರಿ ಅವರು, ಖಾಸಗಿ ಕಟ್ಟಡ ನಿರ್ಮಾಣಕ್ಕಿರುವ ನಿಯಮಗಳು ಸರ್ಕಾರಿ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಘಾಳಿ, ಕಟ್ಟಡ ಎಂದರೆ ಎಲ್ಲವು ಒಂದೇ. ಅವುಗಳಿಗೂ ನಿಯಮಗಳು ಅನ್ವಯಿಸುತ್ತವೆ ಎಂದರು.

ಹಾಗಾದರೆ ಸಾರಿಗೆ ಸಂಸ್ಥೆಯವರು ವಾಣಿಜ್ಯ ಮಳಿಗೆ ನಿರ್ಮಿಸುವಾಗ ಪಾರ್ಕಿಂಗ್‌ಗೆ ಜಾಗೆಯನ್ನೇ ಬಿಟ್ಟಿಲ್ಲ. ಇದರಿಂದಾಗಿ ಬಸ್‌ ನಿಲ್ದಾಣದ ಹೊರಗೆ ರಸ್ತೆ ಮೇಲೆ ವಾಹನ ನಿಲುಗಡೆ ಮಾಡಿ ತೆರಳುತ್ತಾರೆ ಎಂದು ಧಾರವಾಡ ಸಿಬಿಟಿಯಲ್ಲಿನ ಪರಿಸ್ಥಿತಿ ಉದಾಹರಣೆಯಾಗಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಘಾಳಿ, ಸರ್ಕಾರಿ ಕಚೇರಿ ಸೇರಿದಂತೆ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿಯನ್ನೇ ಪಡೆಯುವುದಿಲ್ಲ. ಕಟ್ಟಡ ಪರವಾನಗಿ ಹಾಗೂ ಸಿಸಿ ಪಡೆಯುವುದೇ ಇಲ್ಲ. ಇದೀಗ ಸಿಸಿ ಇಲ್ಲದೇ ವಿದ್ಯುತ್‌ ಸಂಪರ್ಕ ಕೊಡಲಾಗುವುದಿಲ್ಲ ಎಂಬ ನಿಯಮ ಬಂದ ಬಳಿಕ ಸಿಸಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ವಿಮಾನ ನಿಲ್ದಾಣದಲ್ಲೂ ಹಿಂದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂಬುದು ಇದೇ ವೇಳೆ ತಿಳಿಸಿದರು. ಅದಕ್ಕೆ ಮತ್ತೇಗೆ ಅವರಿಗೆ ಅನುದಾನ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಸದಸ್ಯರಿಂದ ಬಂತು. ಅದಕ್ಕೆ ಸಭೆಯಲ್ಲಿ ಉತ್ತರ ದೊರೆಯಲಿಲ್ಲ.