ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ವಾಣಿಜ್ಯ ನಗರ

| Published : Mar 09 2024, 01:31 AM IST

ಸಾರಾಂಶ

ದೇವಸ್ಥಾನಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆದರೆ, ಮಹಿಳಾ ಮತ್ತು ಪುರುಷ ಭಜನಾ ಮಂಡಳಿಯಿಂದ ಸಂಜೆ ಶಿವನಾಮ ಸ್ಮರಣೆ, ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಜಾಗರಣೆ ನಡೆಯಿತು. ಶಿವರಾತ್ರಿ ನಿಮಿತ್ತ ಶಿವನಿಗೆ ಉಪವಾಸ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು

ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ ಮಾಡಲಾಯಿತು. ನಗರದ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಭಕ್ತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು.

ದೇವಸ್ಥಾನಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆದರೆ, ಮಹಿಳಾ ಮತ್ತು ಪುರುಷ ಭಜನಾ ಮಂಡಳಿಯಿಂದ ಸಂಜೆ ಶಿವನಾಮ ಸ್ಮರಣೆ, ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಜಾಗರಣೆ ನಡೆಯಿತು. ಶಿವರಾತ್ರಿ ನಿಮಿತ್ತ ಶಿವನಿಗೆ ಉಪವಾಸ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಯುವತಿಯರು ತಮ್ಮ ಮನೆಯ ಎದುರು ಬಣ್ಣಬಣ್ಣದ ರಂಗೋಲಿಯ ಚಿತ್ತಾರದಲ್ಲಿ ಈಶ್ವರ ಲಿಂಗ ಹಾಗೂ ಶಿವನನ್ನು ಬಿಡಿಸಿದ್ದು ವಿಶೇಷವಾಗಿತ್ತು.

ಶಿವನಿಗೆ ವಿಶೇಷ ಅಲಂಕಾರ: ನಗರದ ಗೋಕುಲ ರಸ್ತೆಯ ಶಿವಪುರ ಕಾಲನಿಯ ಬೃಹದಾಕಾರದ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಯುವಕ- ಯುವತಿಯರು ಶಿವನ ಮೂರ್ತಿಯ ದರ್ಶನ ಪಡೆದು, ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದಿತು.

ಸರದಿಯಲ್ಲಿ ನಿಂತು ದರ್ಶನ: ಹಳೆಯ ಕೋರ್ಟ್ ವೃತ್ತದ ಸಾಯಿ ಮಂದಿರ, ವಿಶ್ವೇಶ್ವರ ನಗರದ ಈಶ್ವರ ದೇವಸ್ಥಾನ ಹಾಗೂ ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗ, ಕೇಶ್ವಾಪುರದ ಪಾರಸ್ವಾಡಿ ಕಾಶಿ ವಿಶ್ವನಾಥ ದೇವಸ್ಥಾನ, ಗೋಕುಲ ರಸ್ತೆಯಲ್ಲಿರುವ ರಾಜಧಾನಿ ಕಾಲನಿಯ ಗಣೇಶ ಮತ್ತು ಈಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಅಲಂಕಾರ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು.

ಉಣಕಲ್ ಬಳಿಯ ಚಂದ್ರಮೌಳೇಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ದೇವಸ್ಥಾನ, ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನ, ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. ಅಭಿನವ ನಗರದಲ್ಲಿರುವ ಆರೂಢಜ್ಯೋತಿ ಶಾಂತಾಶ್ರಮದಲ್ಲಿ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಜ್ಯೋತಿರ್ಲಿಂಗಗಳ ದರ್ಶನ ಪಡೆದರು.

ಶತನಾಮಾವಳಿ ಪಠಣ: ಹು-ಧಾ ಕುರುವಿನಶೆಟ್ಟಿ ಹಿತಾಭಿವೃದ್ಧಿ ಸಂಘ ಹಾಗೂ ಶ್ರೀಗುರು ನೀಕಂಠೇಶ್ವರ ಪತ್ತಿನ ಸೌಹಾರ್ಧ ಸಹಕಾರಿ ನಿಯಮಿತ ಸಹಯೋಗದಲ್ಲಿ ಹುಬ್ಬಳ್ಳಿಯ ನೇಕಾರನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಉಚಿತ ಸಾಮೂಹಿಕ ಶಿವಾಷ್ಟೋತ್ತರ ಶತನಾಮಾವಳಿ ಪಠಣದೊಂದಿಗೆ ಲಕ್ಷ ಬಿಲ್ವಾರ್ಚನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.

ಸದ್ಭಾವನಾ ಶಾಂತಿಯಾತ್ರೆ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಗಳ ಸದ್ಭಾವನಾ ಶಾಂತಿಯಾತ್ರೆ ಶುಕ್ರವಾರ ಸಂಭ್ರಮದಿಂದ ನೆರವೇರಿತು.

ನಗರದ ಬಂಕಾಪುರ ಚೌಕ್ ಬಳಿಯ ಆಶ್ರಮದಿಂದ ಆರಂಭವಾದ ಸದ್ಭಾವನಾ ಯಾತ್ರೆಯು ದೇಸಾಯಿ ಓಣಿ, ಹಿರೇಪೇಟ, ದುರ್ಗದಬೈಲ್, ತುಳಜಾಭವಾನಿ ದೇವಸ್ಥಾನ, ಮೂರುಸಾವಿರಮಠ, ರಾಣಿ ಚೆನ್ನಮ್ಮ ವೃತ್ತ, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ಸಂಚರಿಸಿ ಜೆಸಿ ನಗರದ ಈಶ್ವರೀಯ ವಿವಿ ಆವರಣಕ್ಕೆ ಆಗಮಿಸಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಶಿವಲಿಂಗಗಳಿಂದ ಅಲಂಕೃತಗೊಂಡ ವಾಹನ, ಶಿವ ಸಂದೇಶ ಸಾರುವ ಘೋಷಣೆಗಳು, ಸ್ತಬ್ಧ ಚಿತ್ರಗಳು ವಿಶೇಷ ಗಮನ ಸೆಳೆದವು.

ಅಯೋಧ್ಯಾಧಿಪತಿಯ ದರ್ಶನ: ಇಲ್ಲಿನ ದೇಶಪಾಂಡೆ ನಗರದ ಜಿಮಖಾನ ಮೈದಾನದಲ್ಲಿ ಕ್ಷಮತಾ ಸೇವಾ ಸಂಘದಿಂದ ಅಯೋಧ್ಯೆ ಮಂದಿರದ ಮಾದರಿಯಲ್ಲಿ ಶ್ರೀರಾಮೇಶ್ವರ ಶಿವಲಿಂಗದ ದಿವ್ಯ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮೇಶ್ವರನನ್ನು ಪ್ರತಿಷ್ಠಾಪಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಹಿರೇಮಠದ ಪಂ. ರುದ್ರಮುನಿ ಮಹಾಸ್ವಾಮಿಗಳಿಂದ ಮಹಾಪೂಜೆ ಜರುಗಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರೊಂದಿಗೆ ಸೇರಿ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಶ್ರೀರಾಮೇಶ್ವರನ ದರ್ಶನ ಪಡೆದರು. ಭಕ್ತರಿಗೆ ಅಹೋರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಇದರೊಂದಿಗೆ ಭಕ್ತರಿಗೆ ಉಚಿತವಾಗಿ ಪಂಚಮುಖಿ ರುದ್ರಾಕ್ಷಿ ವಿತರಣೆ ಮಾಡಲಾಯಿತು. ಸಂಜೆ ವೇಳೆ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಮೇಯರ್‌ ವೀಣಾ ಬರದ್ವಾಡ, ಶಿವು ಮೆಣಸಿನಕಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.