ಸಾರಾಂಶ
ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಬೋಟ್ ಸಂಸ್ಥೆಯ ಸಹಯೋಗದಲ್ಲಿ ರಾಮಮೂರ್ತಿನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ನಿರ್ಮಿಸಿಕೊಡಲಾಗಿದ್ದು, ಬುಧವಾರ ಕಂಪ್ಯೂಟರ್ ಲ್ಯಾಬ್‌ಗೆ ಚಾಲನೆ ನೀಡಲಾಯಿತು..
ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಬೋಟ್ ಸಂಸ್ಥೆಯ ಸಹಯೋಗದಲ್ಲಿ ರಾಮಮೂರ್ತಿನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ನಿರ್ಮಿಸಿಕೊಡಲಾಗಿದ್ದು, ಬುಧವಾರ ಕಂಪ್ಯೂಟರ್ ಲ್ಯಾಬ್‌ಗೆ ಚಾಲನೆ ನೀಡಲಾಯಿತು.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿಯಡಿಯಲ್ಲಿ ಒಟ್ಟು 10 ಕಂಪ್ಯೂಟರ್, ಮೌಸ್, ಕೀ ಬೋರ್ಡ್, ಪ್ರೋಜೆಕ್ಟರ್ ಸೇರಿದಂತೆ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಗೆ ಅಗತ್ಯವಿರುವ ಎಲ್ಲ ಸಾಧನ, ಸಲಕರಣೆಗಳನ್ನು ನೀಡಲಾಗಿದೆ.
ಅಲ್ಲಿನ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಲಭ್ಯವಿದೆ. ಆದರೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಬ್ ವ್ಯವಸ್ಥೆ ಇರಲಿಲ್ಲ. ಆ ಕಾರಣಕ್ಕೆ ಲ್ಯಾಬ್ ನಿರ್ಮಿಸಿಕೊಡಲಾಗಿದೆ.
ಕಾಲೇಜಿನಲ್ಲಿನ ಒಟ್ಟು 56 ವಿದ್ಯಾರ್ಥಿನಿಯರಿದ್ದು, ಮೂರು ಪಾಳಿಯಲ್ಲಿ ಕಂಪ್ಯೂಟರ್ ಶಿಕ್ಷಣದ ತರಬೇತಿ ನೀಡಲಾಗುತ್ತದೆ. ಸೈಬರ್ ಸುರಕ್ಷತೆ ಬಗ್ಗೆ ಅಗಮ್ಯ ಸಂಸ್ಥೆಯ ಸಹಯೋಗದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್ ಜಾಕೋಬ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಮ್ಮ ಬೆಂಗಳೂರು ಫೌಂಡೇಶನ್‌ನ ಟ್ರಸ್ಟಿ ಸಂಜಯ್ ಕೆ ಪ್ರಭು, ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವಲ್ಲಿ ಕಂಪ್ಯೂಟರ್ ತರಗತಿಗಳ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ.
ಇಂದಿನ ಡಿಜಿಟಲ್ ಜಗತ್ತಿಗೆ ಅಗತ್ಯವಾದ ತಂತ್ರಜ್ಞಾನ ಕೌಶಲ್ಯಗಳನ್ನು ಮಕ್ಕಳಲ್ಲಿ ವೃದ್ಧಿಸಬೇಕಿದೆ. ಮಕ್ಕಳ ಅಂತರ್ಗತ ಶಿಕ್ಷಣವನ್ನು ಬೆಳೆಸುವ ಮತ್ತು ಭವಿಷ್ಯದ ಪೀಳಿಗೆಯನ್ನು ಸಶಕ್ತಗೊಳಿಸಬೇಕಿದೆ ಎಂದರು.
ಮೌಲ್ಯಯುತವಾದ ಡಿಜಿಟಲ್ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಬೋಟ್ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಅವರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಉನ್ನತ ಶಿಕ್ಷಣ ಮತ್ತು ಭವಿಷ್ಯದ ವೃತ್ತಿಜೀವನದಲ್ಲಿ ಯಶಸ್ಸಿಗೆ ಅವರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬೋಟ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ನವೀನ್ ಹಿರೇಮಠ್, ನಮ್ಮ ಬೆಂಗಳೂರು ಫೌಂಡೇಶನ್ ನ ಪ್ರಧಾನ ವ್ಯವಸ್ಥಾಪಕ ವಿನೋದ್ ಜಾಕೋಬ್, ರಾಮಮೂರ್ತಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಕುಮಾರ್ ಮೊದಲಾದವರಿದ್ದರು.
ನಮ್ಮ ಬೆಂಗಳೂರು ಫೌಂಡೇಶನ್‌ನೊಂದಿಗಿನ ಈ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೌಶಲ್ಯಗಳನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಮಕ್ರಮದಿಂದ ಕಲಿಕೆ ಪ್ರಮಾಣ ಹೆಚ್ಚಾಗಲಿದೆ ಎಂಬು ವಿಶ್ವಾಸವಿದೆ ಎಂದು ಬೋಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸಮೀರ್ ಮೆಹ್ತಾ ಹೇಳಿದರು.