ಭಾಷೆ ಸರಾಗವಾಗಿ ಕಲಿಯಲು ಪೂರಕ ವಾತಾವರಣ ಅವಶ್ಯ

| Published : Mar 22 2025, 02:07 AM IST

ಸಾರಾಂಶ

ಯಾವುದೇ ಭಾಷೆಯನ್ನು ಸರಾಗವಾಗಿ ಕಲಿಯಬೇಕಾದರೆ ಅದಕ್ಕೆ ಪೂರಕವಾದ ವಾತಾವರಣ ಬಹಳ ಅವಶ್ಯಕವಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಯಾವುದೇ ಭಾಷೆಯನ್ನು ಸರಾಗವಾಗಿ ಕಲಿಯಬೇಕಾದರೆ ಅದಕ್ಕೆ ಪೂರಕವಾದ ವಾತಾವರಣ ಬಹಳ ಅವಶ್ಯಕವಿದೆ. ಇಂಗ್ಗಿಷ್ ಭಾಷೆ ಕಲಿಯಬೇಕೆಂದರೆ ನಿಮ್ಮ ಸುತ್ತಮುತ್ತ ಹಾಗೂ ಕುಟುಂಬದಲ್ಲಿ ಇಂಗ್ಗಿಷ್ ಮಾತನಾಡುವ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಆಗ ತಾವುಗಳು ಸರಾಗವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಹುದೆಂದು ಡಿ.ಡಿ.ಎನ್.ಕೆ ಅಸೋಸಿಯೇಶನ್ ಮುಧೋಳ ಕಾರ್ಯಾಧ್ಯಕ್ಷೆ ನಿರ್ಮಲಾ (ಹೇಮಾ) ನಾವಲಗಿ ಹೇಳಿದರು.

ಬಿವಿವಿ ಸಂಘದ ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಇಂಗ್ಲಿಷ್ ವಿಭಾಗದಿಂದ ಆಯೋಜನೆ ಮಾಡಲಾಗಿದ್ದ ಒಂದು ದಿನದ ಇಂಗ್ಲಿಷ್ ಮಾತನಾಡುವ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾದರೆ ನಿರಂತರವಾಗಿ ನಮ್ಮ ವ್ಯವಹಾರಿಕ ಜೀವನದಲ್ಲಿ ಇಂಗ್ಲಿಷ್ ಭಾಷೆ ಬಳಕೆ ಮಾಡುತ್ತಿರಬೇಕು. ಈ ಅಭ್ಯಾಸ ನಿರಂತರವಾಗಿ ಇರಬೇಕು. ತಪ್ಪಾದರೇ ಅಪಹಾಸ್ಯಕ್ಕೆ ಈಡಾಗುವೆವು ಎಂಬ ಆತಂಕ ದೂರವಿಟ್ಟು ಸುತ್ತಮುತ್ತಲಿನ ತನ್ನ ಆಪ್ತರ ಜೊತೆಗೆ ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು, ಹೀಗೆ ನಿರಂತರ ಭಾಷಾ ಸಂವಹನ ಇದ್ದರೆ ಇಂಗ್ಲಿಷ್ ಭಾಷೆ ಮಾತನಾಡಲು ಸರಾಗವಾಗಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ವೆಂದರು.

ಪ್ರಾಚಾರ್ಯ ಪ್ರೊ.ಎಂ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಇಂಗ್ಲಿಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದ ಸಂವಹನ ಭಾಷೆಯಾಗಿದೆ. ಹಾಗಾಗಿ ನೀವು ಭವಿಷ್ಯದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಇಂಗ್ಲಿಷ್ ಭಾಷೆಯ ಅಧ್ಯಯನದ ಅವಶ್ಯಕತೆ ಇದೆ. ನಮ್ಮ ಭಾಷೆ ಪ್ರೀತಿಸಿ, ಆಂಗ್ಲಭಾಷೆ ಕಲಿಯಿರಿ ಎಂದು ಹೇಳಿದರು. ಮಹಾಲಿಂಗಪುರದ ಡಾ.ಎಸ್.ರಾಧಾಕೃಷ್ಣನ್ ಎಜ್ಯೂಕೇಶನ್ ಸೊಸೈಟಿ ಕಾರ್ಯಾಧ್ಯಕ್ಷ ಶಶಿಧರ ಉಳ್ಳೇಗಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಇಂಗ್ಲಿಷ್ ಭಾಷೆ ಕಲಿಕೆಯ ಮಹತ್ವ ಕುರಿತು ವಿವರಿಸಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಎ.ಸಿ.ಕೆರೂರ, ಇಂಗ್ಲಿಷ್ ಭಾಷೆ ಉಪನ್ಯಾಸಕ ಪ್ರೊ.ಎಂ.ಎಸ್.ಗಡ್ಡಿ ಹಾಗೂ ಐಕ್ಯೂಎಸಿ ಸಂಯೋಜಕಿ ಪ್ರೊ.ಎ.ಎನ್.ಬಾಗೇವಾಡಿ ಉಪಸ್ಥಿತರಿದ್ದರು. ಪ್ರೊ.ಎ.ಎನ್.ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಎ.ಸಿ.ಕೆರೂರ ಸ್ವಾಗತಿಸಿ, ಪ್ರೊ.ಎಸ್.ಬಿ.ಕಬ್ಬಿಣದ ನಿರೂಪಿಸಿ, ಪ್ರೊ.ಎಂ.ಎಸ್.ಗಡ್ಡಿ ವಂದಿಸಿದರು. ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.