ಸಾರಾಂಶ
ಪ್ರಾಧಿಕಾರದಿಂದ ಮರಣ ಪ್ರಮಾಣಪತ್ರವನ್ನು ಪಡೆಯುವುದಕ್ಕೆ ಹಲವಾರು ತಿಂಗಳುಗಳೇ ಬೇಕಾಗುತ್ತದೆ. ಶುಲ್ಕ, ಗೈರೆಗಳಿಗೆ ಸಂಬಂಧಿಸಿದಂತೆ ಸಾವಿರಾರು ರು.ಗಳನ್ನು ಹೆಚ್ಚುವರಿಯಾಗಿ ಸಾರ್ವಜನಿಕರು ಭರಿಸಬೇಕಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರದ ಹೊಸ ನಿಯಮಾವಳಿಯಂತೆ ವಂಶವೃಕ್ಷ ಪಡೆಯುವುದು ಇದೀಗ ಸಾರ್ವಜನಿಕರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ಆರೋಪಿಸಿದ್ದಾರೆ.ಹಿಂದೆ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸ್ಥಳ ಮಹಜರು ನಡೆಸಿ ವಂಶವೃಕ್ಷ ನೀಡುತ್ತಿದ್ದರು. ಇದೀಗ ಹಿರಿಯರ ಮರಣ ಪ್ರಮಾಣಪತ್ರವನ್ನು ನೋಂದಾಯಿಸದೆ ಮರಣ ಪ್ರಮಾಣಪತ್ರ ಪಡೆಯದವರು ಕಂದಾಯ ಇಲಾಖೆ ಹೊರತಾಗಿ ಹೊಸ ಪ್ರಾಧಿಕಾರದ ಮೂಲಕ ಮರಣ ಪ್ರಮಾಣಪತ್ರ ಪಡೆದು ಅದನ್ನು ತಹಸೀಲ್ದಾರ್ ಕಚೇರಿಗೆ ತಲುಪಿಸಿ ನಂತರ ವಂಶವೃಕ್ಷವನ್ನು ಪಡೆಯಬೇಕೆಂಬ ಹೊಸ ಆದೇಶ ಸಾರ್ವಜನಿಕರು ಅದರಲ್ಲೂ ರೈತ ಕುಟುಂಬಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಈಗ ಮರಣ ಪ್ರಮಾಣಪತ್ರ, ವಂಶವೃಕ್ಷ ಪಡೆಯುವವರು ಮೊದಲು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ತಹಸೀಲ್ದಾರ್ ಕಚೇರಿಯವರು ಹಿರಿಯರ ಮರಣ ಪ್ರಮಾಣಪತ್ರ ಅಲಭ್ಯವೆಂದು ತಿಳಿಸಿದ ಬಳಿಕ ವಕೀಲರಿಂದ ಅಫಿಡೆವಿಟ್ ಮಾಡಿಸಿ ನಂತರ ಅದನ್ನು ಪ್ರಾಧಿಕಾರದ ಮುಂದೆ ತಂದು ಬಳಿಕ ಪ್ರಾಧಿಕಾರ ಗ್ರಾಮ ಲೆಕ್ಕಿಗರು ಮತ್ತು ರಾಜಸ್ವನಿರೀಕ್ಷರ ಮಹಜರು ನಡೆಸಿ ನೀಡುವಂತೆ ನಿಯಮವಾಳಿ ರೂಪಿಸಲಾಗಿದೆ ಎಂದಿದ್ದಾರೆ.ಪ್ರಾಧಿಕಾರದಿಂದ ಮರಣ ಪ್ರಮಾಣಪತ್ರವನ್ನು ಪಡೆಯುವುದಕ್ಕೆ ಹಲವಾರು ತಿಂಗಳುಗಳೇ ಬೇಕಾಗುತ್ತದೆ. ಶುಲ್ಕ, ಗೈರೆಗಳಿಗೆ ಸಂಬಂಧಿಸಿದಂತೆ ಸಾವಿರಾರು ರು.ಗಳನ್ನು ಹೆಚ್ಚುವರಿಯಾಗಿ ಸಾರ್ವಜನಿಕರು ಭರಿಸಬೇಕಿದೆ. ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳದಿಂದ ಬಸವಳಿದಿರುವ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳಿಗೆ ಅಲೆಯುತ್ತಾ ಸಾವಿರಾರು ರು. ಹೊರೆ ಹೊರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಹಿಂದಿನ ಪದ್ಧತಿಯ ಪ್ರಕಾರ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಮಹಜರು ನಡೆಸಿ ನೀಡುವ ವಂಶವೃಕ್ಷ ನಿಯಮಾವಳಿಯನ್ನು ಮುಂದುವರೆಸುವಂತೆ ರೈತ ಸಂಘದ ಇಂಡುವಾಳು ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಮುಟ್ಟನಹಳ್ಳಿ ಪ್ರಶಾಂತ್, ಎಸ್.ಸಿ.ಯೋಗಾನಂದ, ವಡ್ಡರಹಳ್ಳಿ ಚಂದ್ರಶೇಖರ್, ಸಂಪಹಳ್ಳಿ ಶಿವಶಂಕರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೋರಿದ್ದಾರೆ.