ಕನ್ನಡಪ್ರಭ ವಾರ್ತೆ ಬೀದರ್
ದೆಹಲಿಯಲ್ಲಿ ನಡೆದ ಪ್ರತಿಭಟನೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ನೆಪ ಮಾತ್ರವಾಗಿದ್ದು, ಪ್ರಧಾನಿ ಮೋದಿ ಅವರಿಗೆ ಕೆಟ್ಟ ಹೆಸರು ತರುವ ಸಂಚು ನಡೆದಿತ್ತು ಎಂದು ಆಂದೋಲಾದ ಸಿದ್ದಲಿಂಗ ಶ್ರೀಗಳು ಹೇಳಿದರು.ನಗರದಲ್ಲಿ ಭಾನುವಾರ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ರೌಡಿಗಳು, ಗೂಂಡಾಗಳು ಸೇರಿ ದೇಶವಿರೋಧಿ ಘೋಷಣೆ ಕೂಗಿದ್ದಾರೆ. ಅಲ್ಲದೇ ರಾಮನಿಗೆ ಹಾಗೂ ರಾಷ್ಟ್ರಕ್ಕೆ ಅವಮಾನ ಮಾಡುವ ಕೆಲಸ ಕೂಡ ನಡೆದಿದೆ ಎಂದರು.
ಬೆಂಗಳೂರು ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಫೋಟೋ ಪ್ರದರ್ಶಿಸಿರುವುದು ಗಂಭೀರ ವಿಷಯವಾಗಿದ್ದು ಉಮರ್ ಖಾಲಿದ್ ಚಿತ್ರ ಹಿಡಿದು ದೇಶವಿರೋಧಿ ಘೋಷಣೆ ಕೂಗಿದವರ ವಿರುದ್ಧ ಇನ್ನೂ ಕ್ರಮವಾಗಿಲ್ಲ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಸರಿ ಕಂಡರೆ ಉರಿದು ಬೀಳುತ್ತಾರೆ ಎಂದು ಆಂದೋಲಶ್ರೀ ಕಿಡಿಕಾರಿದರು.ದೇಶದ್ರೋಹಿಗಳಿಗೆ ಯಾವುದೇ ಲಾಭವಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಂದೋಲ ಶ್ರೀಗಳು ಆಗ್ರಹಿಸಿದ್ದಾರೆ.
ಏಕನಾಥ ಶಿಂಧೆ ಬಣದ ಶಿವಸೇನಾ ಜಿಲ್ಲಾಧ್ಯಕ್ಷರ ನೇಮಕ:
ಏಕನಾಥ ಶಿಂಧೆ ಬಣದ ಶಿವಸೇನೆಯ ಜಿಲ್ಲಾಧ್ಯಕ್ಷರಾಗಿ ಸುಧಾಕರ್ ಬಿರಾದಾರ್ ಅವರನ್ನು ಆಯ್ಕೆಯಾಗಿದ್ದಾರೆ ಎಂದು ಶಿವಸೇನಾದ ರಾಜ್ಯಾಧ್ಯಕ್ಷ ಆಂದೋಲಾ ಶ್ರೀ ಹೇಳಿದರು.
2025ರಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಏಕನಾಥ್ ಶಿಂದೆ ಅವರ ಬಣದ ಶಿವಸೇನಾ ಘಟಕ ಪ್ರಾರಂಭ ಮಾಡಲಾಗಿದೆ. ಈಗ ಬೀದರ್ ಜಿಲ್ಲೆಯ ಅಧ್ಯಕ್ಷರಾಗಿ ಸುಧಾಕಾರ್ ಬಿರಾದಾರ್ ಅವರನ್ನು ಆಯ್ಕೆ ಮಾಡಲಾಗಿದೆ.ಶಿವಸೇನಾವು ದೇಶದ 25 ರಿಂದ 26 ರಾಜ್ಯಗಳಲ್ಲಿ ಕಾರ್ಯ ಪ್ರಾರಂಭ ಮಾಡಿದೆ. ಇದರ ಮುಖ್ಯ ಉದ್ದೇಶವೇ ಭ್ರಷ್ಟಾಚಾರವನ್ನು ಅಳಿಸಿ ಅಭಿವೃದ್ಧಿ ಹಾಗೂ ಹಿಂದುತ್ವ ಬೆಳೆಸುವುದಾಗಿದೆ ಎಂದರು.
ರಾಜ್ಯದಲ್ಲಿ ನಡೆಯುವ ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಶಿವಸೇನೆ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಿವಸೇನಾದ ನೂತನ ಜಿಲ್ಲಾಧ್ಯಕ್ಷ ಸುಧಾಕರ್ ಬಿರಾದಾರ್, ಅಮೃತ್ ಪಾಟೀಲ್, ಗೋರಕನಾಥ್ ಮಡಿವಾಳ್, ನಾಗನಾಥ್ ವಾಡೆಕರ್, ಸಿಂಧುತಾಯಿ ಮಾನೆ, ನಂದಾತಾಯಿ ಹಾಗೂ ರಾಕೇಶ್ ಜಮಾದಾರ್ ಸೇರಿದಂತೆ ಇತರರು ಇದ್ದರು.