ಜೋಡಿ ಸಲಗಗಳ ಕಾಡಿಗಟ್ಟಲು ನಿರಂತರ ಕಾರ್ಯಾಚರಣೆ

| Published : Jun 15 2024, 01:02 AM IST

ಜೋಡಿ ಸಲಗಗಳ ಕಾಡಿಗಟ್ಟಲು ನಿರಂತರ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂಸೆ ರಹಿತವಾಗಿ ಮತ್ತು ಆನೆಗಳು ಯಾವುದೇ ಪ್ರಚೋದನೆಗೆ ಒಳಗಾಗದಂತೆ ಜಾಗರೂಕತೆಯಿಂದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ನಡೆಯುತ್ತಿದೆ.

ಕನ್ನಡಪ್ರಭವಾರ್ತೆ ಪುತ್ತೂರು:

ಕಳೆದ ಕೆಲ ದಿನಗಳಿಂದ ಪುತ್ತೂರು ತಾಲೂಕಿನ ಹಲವು ಭಾಗಗಳಲ್ಲಿ ಬೀಡು ಬಿಟ್ಟು, ಕೃಷಿ ಹಾನಿ ಮಾಡುವುದರ ಜೊತೆಗೆ ಜನರಲ್ಲಿ ಆತಂಕ ಮೂಡಿಸಿದ್ದ ಜೋಡಿ ಸಲಗಗಳನ್ನು ಇದೀಗ ಬಂದ ದಾರಿಯಲ್ಲಿಯೇ ಹಿಂದಕ್ಕಟ್ಟುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆನೆಗಳನ್ನು ಬಂದ ದಾರಿಯಲ್ಲಿಯೇ ವಾಪಸ್‌ ಕಳುಹಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ.

ದುಬಾರೆ ಆನೆ ಸಲಹಾ ಕೇಂದ್ರದಿಂದ ಕರೆಸಲಾದ ಸುಮಾರು ೨೦ ಮಂದಿ ಪರಿಣತ ಸಿಬ್ಬಂದಿ ಹಾಗೂ ಪುತ್ತೂರು ಮತ್ತು ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಬುಧವಾರದಿಂದ ಜೋಡಿ ಸಲಗಗಳನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿಂಸೆ ರಹಿತವಾಗಿ ಮತ್ತು ಆನೆಗಳು ಯಾವುದೇ ಪ್ರಚೋದನೆಗೆ ಒಳಗಾಗದಂತೆ ಜಾಗರೂಕತೆಯಿಂದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ನಡೆಯುತ್ತಿದೆ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯಿಂದ ಬೆದ್ರಾಳ, ಶಾಂತಿಗೋಡು, ಪಂಜಿಗ, ವೀರಮಂಗಲ ದಾರಿಯಾಗಿ ನಿಧಾನಗತಿಯಲ್ಲಿ ಹಿಂದಿರುಗಿದ ಆನೆಗಳು ಗುರುವಾರ ರಾತ್ರಿ ಸರ್ವೆ ಗ್ರಾಮದ ಸೊರಕೆ ಪ್ರದೇಶ ತಲುಪಿದ್ದವು. ಶುಕ್ರವಾರ ಹಗಲು ಹೊತ್ತು ಇದೇ ಭಾಗದ ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.

ಸುಳ್ಯದಿಂದ ಪುತ್ತೂರಿಗೆ ಆಗಮನ: ಮೊದಲಿಗೆ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಸಲಗಗಳು ಜೂ. ೫ರಿಂದ ಪುಣ್ಚಪ್ಪಾಡಿ, ಕೊಳ್ತಿಗೆ ಪೆರ್ಲಂಪಾಡಿ ಭಾಗದ ಮೂಲಕ ಪುತ್ತೂರು ತಾಲೂಕು ವ್ಯಾಪ್ತಿಗೆ ಪ್ರವೇಶಿಸಿತ್ತು. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ, ಕಟಾರ ಪರಿಸರಗಳಲ್ಲಿ ಕಾಣಿಸಿಕೊಂಡಿತ್ತು. ಅಲ್ಲದೆ ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿ ರಾತ್ರಿ ಕಾಣಿಸಿಕೊಂಡಿದ್ದ ಸಲಗಗಳು ಬಳಿಕ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕಾಣಿಸಿಕೊಂಡು, ಅಲ್ಲಿ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿ ಹಗಲು ಹೊತ್ತು ಮಲಗಿದ್ದ ಆನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಿದ್ದರು.

ಒಮ್ಮೆ ಹಿಂದಿರುಗಿದರೂ ಬಳಿಕ ತಿರುಗಿ ಬಂದ ಸಲಗಗಳು ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿನ ಕೆಲವು ರೈತರ ಕೃಷಿಯನ್ನು ನಾಶ ಮಾಡಿತ್ತು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಬಂದ ಆನೆಗಳು ಅಲ್ಲಿಯೂ ಒಂದು ರಾತ್ರಿ ಕಳೆದಿತ್ತು. ಅಲ್ಲಿಂದ ಮುಂದುವರಿದು ಜೂ.೧೦ ಕ್ಕೆ ಶಾಂತಿಗೋಡು ಗ್ರಾಮಕ್ಕೆ ಆಗಮಿಸಿದ್ದು, ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೆ ಒಂದು ರಾತ್ರಿಯನ್ನು ಕಳೆದಿತ್ತು. ಜೂ.೧೧ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ಅಡಕೆ ತೋಟದಲ್ಲಿ ಕಂಡು ಬಂದಿತ್ತು. ಅರಣ್ಯ ಇಲಾಖೆ ಕಾರ್ಯಚರಣೆ ವೇಳೆ ಎರಡು ಆನೆಗಳು ಸಂಚಾರ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಇಲ್ಲಿನ ಕಟಾರದ ಕೋಡಿಮರ ನಿವಾಸಿ ಕೇಶವ ಎನ್ನುವವರ ಮನೆಯಂಗಳದವರೆಗೂ ಬಂದಿರುವ ಆನೆಗಳು ಅಂಗಳದಲ್ಲಿ ಬೆಳೆಸಿದ್ದ ಕಬ್ಬನ್ನು ತಿಂದು ಫಸಲಿಗೆ ಸಿದ್ಧವಾಗಿ ನಿಂತಿದ್ದ ಹತ್ತಕ್ಕೂ ಮಿಕ್ಕಿದ ತೆಂಗಿನ ಗಿಡಗಳನ್ನು ತಿಂದು ಬಳಿಕ ಕಿತ್ತೆಸೆದು ಹಾನಿಗೊಳಿಸಿತ್ತು. ಆನೆಯನ್ನು ಹಿಮ್ಮೆಟ್ಟಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಳಿಕ ದುಬಾರೆಯ ಆನೆ ಸಲಹಾ ಕೇಂದ್ರದಿಂದ ಪರಿಣತರನ್ನು ಕರೆಸಿಕೊಂಡು ಬುಧವಾರದಿಂದ ಕಾರ್ಯಾಚರಣೆ ಆರಂಭಿಸಿದ್ದರು. ಸಿಬ್ಬಂದಿ ಕಾರ್ಯಾಚರಣೆಯ ಫಲವಾಗಿ ಆನೆಗಳು ಹಿಂದಿರುಗುವ ದಾರಿಯಲ್ಲಿದೆ. ಶುಕ್ರವಾರ ರಾತ್ರಿಯೂ ಕಾರ್ಯಾಚರಣೆ ನಡೆಸಿ ಆನೆಗಳನ್ನು ಗೌರಿ ಹೊಳೆಯ ದಂಡೆಯ ಮೇಲೆ ಸಾಗಿಸಿ ಮುಂದುವರಿದು ಸವಣೂರು, ಪುಣ್ಚಪ್ಪಾಡಿ, ಕುಮಾರಮಂಗಲ, ನೂಜೆ ಮೂಲಕ ಮುಂದುವರಿಸಿ ಬಂಬಿಲದಲ್ಲಿ ಸಾಗಿ ಪಾಲ್ತಾಡ್ ಗ್ರಾಮ ಪ್ರವೇಶಿಸಿ ಅಲ್ಲಿಂದ ಕೊಳ್ತಿಗೆ ಗ್ರಾಮಕ್ಕೆ ಹಿಂದಿರುಗಿಸಬೇಕೆಂಬುದು ಅರಣ್ಯ ಇಲಾಖೆಯ ಯೋಜನೆಯಾಗಿದೆ ಎಂದು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ತಿಳಿಸಿದ್ದಾರೆ.ಕಳೆದ ಕೆಲ ದಿನಗಳಿಂದ ಪುತ್ತೂರಿನ ಹಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಆನೆಗಳು ಎಲ್ಲಿಯೂ ಸಹನೆ ಮೀರಿದ ವರ್ತನೆ ತೋರಿಸಿಲ್ಲ. ರಾತ್ರಿ ವೇಳೆಯಲ್ಲಿ ಆಹಾರ ಅರಸಿಕೊಂಡು ಕೃಷಿ ತೋಟಗಳಿಗೆ ನುಗ್ಗಿ ಅಲ್ಪ ಮಟ್ಟಿಗೆ ಕೃಷಿಹಾನಿ ಮಾಡಿದ್ದನ್ನು ಬಿಟ್ಟರೆ ಇನ್ನು ಯಾವುದೇ ರೀತಿಯ ತೊಂದರೆಯನ್ನು ಮಾಡಿಲ್ಲ. ಜೋಡಿ ಸಲಗಗಳು ಎರಡೂ ಗಂಡಾನೆಗಳು ಎಂದು ತಿಳಿದು ಬಂದಿದೆ. ಆನೆಗಳು ಹಿಂದಿರುಗುತ್ತಿರುವುದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.