ಸಾರಾಂಶ
ಕನ್ನಡಪ್ರಭವಾರ್ತೆ ಹನೂರು
ಮಾರ್ಟಳ್ಳಿ ಗ್ರಾಮದಲ್ಲಿ ಮೆಟ್ಲಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಗುತ್ತಿಗೆದಾರನಿಗೆ ಗ್ರಾಮಸ್ಥರಿಂದ ಮುತ್ತಿಗೆ ಹಾಕಿ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದರು.ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಮಶಾನ ಸಮೀಪದಿಂದ ಗೋಡೆಸ್ ನಗರದ ವರೆಗೆ 8 ಕಿ.ಮೀ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡುವಂತೆ ಕಳೆದ ತಿಂಗಳು ಕರ್ನಾಟಕ ರಾಜ್ಯ ರೈತ ಸಂಘ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಜೂ.21 ರಂದು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಸೋಮವಾರ ಗುತ್ತಿಗೆದಾರರೊಬ್ಬರು ಮಾರ್ಟಳ್ಳಿ ಗ್ರಾಮದ ಸ್ಮಶಾನದ ಮುಂಭಾಗದ ರಸ್ತೆಯಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ಸಮತಟ್ಟು ಮಾಡುತ್ತಿದ್ದಾಗ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಡಾಂಬರೀಕರಣ ರಸ್ತೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಹೀಗಾಗಿ ಇಲ್ಲಿ ಮೆಟ್ಲಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಆದ್ದರಿಂದ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.
ಜಿಲ್ಲಾ ಪಂಚಾಯಿತಿ ಅಧಿಕಾರಿ ಒಬ್ಬರಿಗೆ ಕರ್ನಾಟಕ ರಾಜ್ಯ ರೈತ ಸಂಘ ಭಾಗದ ಗ್ರಾಮ ಘಟಕದ ಅಧ್ಯಕ್ಷ ಅರ್ಪಿದ ಸ್ವಾಮಿ ಹಾಗೂ ಉಪಾಧ್ಯಕ್ಷ ಮಾದೇಶ್ ಹಾಗೂ ಕೂಡ್ಲೂರು ವೆಂಕಟೇಶ್ ಸುಸೈಜ್ ಮಾಣಿಕ್ಯಂ ಇನ್ನಿತರ ರೈತ ಮುಖಂಡರು ಪಿ ಆರ್ ಡಿಒ, ಎಇಇ ಶಿವಪ್ರಕಾಶ್ ಅವರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಗ್ರಾಮದಲ್ಲಿ ನಡೆಯುತ್ತಿರುವ ಮಣ್ಣಿನ ಮೆಟ್ಲಿಂಗ್ ಕಾಮಗಾರಿ ನಿಲ್ಲಿಸಬೇಕು ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಓತ್ತು ನೀಡಬೇಕು ಎಂದು ಒತ್ತಾಯಿಸಿ ಯಂತ್ರದ ಮೂಲಕ ನಡೆಸಲಾಗುತ್ತಿದ್ದ ಮೆಟ್ಲಿಂಗ್ ಕಾಮಗಾರಿಯನ್ನು ಸ್ಥಗಿತಗೊಳಿಸಿದರು.ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿ ಮುಖ್ಯ ರಸ್ತೆ ತೀರ ಹದಗೆಟ್ಟಿದ್ದು ಈ ಬಗ್ಗೆ ಕಳೆದ ತಿಂಗಳು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆಯನ್ನು ಗ್ರಾಪಂ ಮುಂಭಾಗ ಹಮ್ಮಿಕೊಂಡು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಹೀಗಾಗಿ ಡಾಂಬರೀಕರಣ ರಸ್ತೆಗೆ ಮನವಿ ನೀಡಿದ್ದೇವೆ. ಮೆಟ್ಲಿಂಗ್ ಮಾಡಲು ಬಂದಿದ್ದ ಗುತ್ತಿಗೆದಾರನಿಗೆ ಕೆಲಸ ನಿಲ್ಲಿಸುವಂತೆ ಗ್ರಾಮಸ್ಥರು ಮತ್ತು ರೈತ ಸಂಘದಿಂದ ಪ್ರತಿಭಟಿಸಿ ಕಾಮಗಾರಿ ನಿಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
-ಅರ್ಪಿದ ಸ್ವಾಮಿ, ಮಾರ್ಟಳ್ಳಿ, ಗ್ರಾಮ ಘಟಕದ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ.