ಸ್ವಯಂ ಬದುಕು ಕಟ್ಟಿಕೊಳ್ಳಲು ಅನುಕೂಲವಾದ ರಿಟೇಲ್ ಉತ್ಸವ

| Published : Feb 12 2024, 01:36 AM IST / Updated: Feb 12 2024, 02:33 PM IST

Retail Festival

ಸಾರಾಂಶ

ಕುಷ್ಟಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಸ್ವಯಂ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲು ರಿಟೇಲ್ ಉತ್ಸವ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕುಷ್ಟಗಿ: ಒಂದು ಅಂಗಡಿಯ ಮಳಿಗೆಯಲ್ಲಿ ಗುಲಾಬ್‌ ಜಾಮೂನ್‌, ಪಾನಿಪುರಿ, ಇನ್ನೊಂದು ಅಂಗಡಿಯ ಮಳಿಗೆಯಲ್ಲಿ ವಡೆ ಮಂಡಕ್ಕಿ, ಮತ್ತೊಂದು ಅಂಗಡಿಯಲ್ಲಿ ಹಣ್ಣುಗಳ ಸಲಾಡ್ ಹೀಗೆ ಸುಮಾರು 25 ಅಂಗಡಿಯ ಮಳಿಗೆಗಳಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡುವ ಮೂಲಕ ವ್ಯಾಪಾರದ ಅನುಭವ ಪಡೆದುಕೊಂಡರು.

ಕುಷ್ಟಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಸ್ವಯಂ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲು ರಿಟೇಲ್ ಉತ್ಸವ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸ್ವಯಂ ಖರ್ಚಿನಿಂದ ಸಾಮಾನುಗಳನ್ನು ಖರೀದಿಸಿ ಮಾರುಕಟ್ಟೆ ಸೃಷ್ಟಿಸಿ ವಿವಿಧ ಬಗೆಯ ಉತ್ಪನ್ನಗಳ ಮಾರಾಟದ ಅಂಗಡಿಗಳನ್ನು ಹಾಕಿಕೊಂಡಿದ್ದುದು ಕಂಡುಬಂದಿತು.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದಿಂದ ಮಾತ್ರ ವಾಣಿಜ್ಯ ವ್ಯವಹಾರ ಕಲಿತುಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿಗಳಿಗಾಗಿ ರಿಟೇಲ್ ಉತ್ಸವ ಎಂಬ ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಒಟ್ಟು 600 ವಿದ್ಯಾರ್ಥಿಗಳು 25 ಅಂಗಡಿಗಳನ್ನು ಹಾಕುವ ಮೂಲಕ ವ್ಯಾಪಾರ ವಹಿವಾಟು ನಡೆಸಿದರು.

ಕಾಲೇಜಿನ ಆವರಣಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿಗಳು, "ನಮಸ್ಕಾರ ನಮ್ಮ ಅಂಗಡಿಗೆ ಬನ್ನಿ, ಈ ಸಾಮಾನು ತೆಗೆದುಕೊಳ್ಳಿ. ಆ ಸಾಮಾನು ಒಳ್ಳೆಯದು, ಇದನ್ನೇ ಖರೀದಿ ಮಾಡಿಕೊಳ್ಳಿ. 

ದರ ಕಡಿಮೆ ಇದೆ ಬನ್ನಿ ಎಂಬ ಮಾತುಗಳು ಕೇಳಿ ಬಂದವು. ವ್ಯಾಪಾರಕ್ಕಿಳಿದ ವಿದ್ಯಾರ್ಥಿಗಳ ಮೊಗದಲ್ಲಿ ಕೈಗೆ ಹಣ ಬರುತ್ತಿದ್ದಂತೆ ಸಾರ್ಥಕ ಕ್ಷಣಗಳ ಅನುಭವ ಕಂಡು ಬಂದಿತು.

ಅಂಗಡಿಗಳಲ್ಲಿ ಬಗೆ ಬಗೆಯ ತಿಂಡಿಗಳಾದ ಬೋಂಡಾ, ಕಡಕ ರೊಟ್ಟಿ ಕಾಳು ಪಲ್ಲೆ, ಚಟ್ನಿ, ಬಿಸ್ಕಿಟ್, ಚಹಾ, ಎಲೆ-ಅಡಿಕೆ, ಕುರಕುರಿ, ಎಳೆನೀರು, ತಂಪಾದ ಪಾನೀಯಗಳು, ಪುಸ್ತಕ, ಬಟ್ಟೆ, ಮೊಬೈಲ್ ಸಾಮಾನುಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ವಿದ್ಯಾರ್ಥಿಗಳು ತಯಾರಿಸಿ ಕಾಲೇಜಿನ ಆವರಣದಲ್ಲಿ ವ್ಯಾಪಾರ ಮಾಡಿದರು.

ರಿಟೇಲ್ ಉತ್ಸವದ ವಿನೂತನ ಮಾರುಕಟ್ಟೆಯನ್ನು ಕಾಲೇಜು ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಉದ್ಘಾಟಿಸಿ ಮಾತನಾಡಿ, ಸರ್ಕಾರವು ಓದಿದ ಪ್ರತಿಯೊಬ್ಬರಿಗೂ ನೌಕರಿ ನೀಡುವುದು ಅಸಾಧ್ಯ. 

ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಳ್ಳಲು ಮತ್ತು ವ್ಯವಹಾರದ ಬಗ್ಗೆ ಆಸಕ್ತಿ ಮೂಡಿಸುವ ಸದುದ್ದೇಶದಿಂದ ರಿಟೇಲ್ ಉತ್ಸವದ ಮೂಲಕ ಮಾರುಕಟ್ಟೆ ಅನುಭವ ಲಾಭ ನಷ್ಟದ ಜ್ಞಾನ ಸಿಗಲು ಈ ವ್ಯವಸ್ಥೆ ಮಾಡಲಾಗಿದೆ. 

ವ್ಯವಹಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ವತಃ ಬಂಡವಾಳ ಹಾಕಿ ವ್ಯಾಪಾರದಲ್ಲಿ ತೊಡಗಿದ್ದರು. ಇದಕ್ಕೆ ಪ್ರೇರಕ ಶಕ್ತಿಯಾಗಿ ಕಾಲೇಜಿನ ಉಪನ್ಯಾಸಕರು ಶ್ರಮಿಸಿದ್ದಾರೆ ಎಂದರು.

ಸ್ವಯಂ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ಅನುಭವ ಸಿಗಬೇಕು ಎಂಬ ಸದುದ್ದೇಶದಿಂದ ರಿಟೇಲ್ ಉತ್ಸವ ಮಾರುಕಟ್ಟೆ ಸೃಷ್ಟಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ ಕಾಲೇಜು ಪ್ರಾಚಾರ್ಯ ಡಾ.ಎಸ್.ವಿ. ಡಾಣಿ.