ಸಾರಾಂಶ
ಭಾರತದ ಸಂವಿಧಾನ ಶ್ರೀರಾಮಚಂದ್ರನ ಆದರ್ಶವಾದ ಪಿತೃವಾಕ್ಯ ಪರಿಪಾಲನೆ, ಭ್ರಾತೃತ್ವ ರಕ್ಷಣೆ, ಸಾಂಸಾರಿಕ ಧರ್ಮ ಪಾಲನೆ, ರಾಜ್ಯ ಪ್ರಜಾ ಪರಿಪಾಲನೆಯಂತಹ ಅಮೂಲ್ಯವಾದ ಸೂಕ್ಷ್ಮ ಸಂವೇದಿ ಮೌಲ್ಯಗಳಿಂದ ಮಿಳಿತವಾಗಿದೆ. ನಮ್ಮ ಸಂವಿಧಾನದ ಆಶಯ ಅದರ ಪೀಠಿಕೆಯಲ್ಲಿ ವ್ಯಕ್ತವಾಗಿದ್ದು ಅದನ್ನು ಜನತೆ ಪರಿಪಾಲಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಒಂದು ದೇಶವೆಂದರೆ ಅದು ಕೇವಲ ಭೂ ಭಾಗದ ಒಂದು ಮಣ್ಣು ಗುಡ್ಡೆಯಲ್ಲ. ಮಾನಸಿಕವಾಗಿ ದೈಹಿಕವಾಗಿ ಸದೃಢವಾದ ಚಾರಿತ್ರ್ಯವಂತರು ನೆಲೆಸಿದ್ದು ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಕಾಪಾಡಿಕೊಂಡು ಶಾಂತಿ, ಸೌಹಾರ್ದ, ಸಾಮರಸ್ಯದಿಂದ ಬಾಳುವ ನೆಲೆಬೀಡು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದ ಧ್ವಜ ಮೈದಾನದಲ್ಲಿ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಆಶೀರ್ವಚನ ನೀಡಿ ಮಾತನಾಡಿ, ಜಗತ್ತಿನ ಇತಿಹಾಸದಲ್ಲಿ ಅನೇಕ ನಾಗರೀಕತೆಗಳು ಹುಟ್ಟಿ ಮಾಯವಾಗಿದೆ. ಆದರೆ ಭಾರತದ ನಾಗರೀಕತೆ ಅಂದಿನಿಂದ ಇಂದಿನವರೆಗೂ ಹುಟ್ಟಿ ಬೆಳೆದು ನಿರಂತರವಾಗಿ ಮುಂದುವರೆಯುತ್ತಾ ಇರುವುದಕ್ಕೆ ಇಲ್ಲಿನ ಆದರ್ಶಗಳೇ ಕಾರಣ ಎಂದರು.ಸಂವಿಧಾನದ ಆಶಯ ಪಾಲಿಸಿ
ಭಾರತದ ಸಂವಿಧಾನ ಶ್ರೀರಾಮಚಂದ್ರನ ಆದರ್ಶವಾದ ಪಿತೃವಾಕ್ಯ ಪರಿಪಾಲನೆ, ಭ್ರಾತೃತ್ವ ರಕ್ಷಣೆ, ಸಾಂಸಾರಿಕ ಧರ್ಮ ಪಾಲನೆ, ರಾಜ್ಯ ಪ್ರಜಾ ಪರಿಪಾಲನೆಯಂತಹ ಅಮೂಲ್ಯವಾದ ಸೂಕ್ಷ್ಮ ಸಂವೇದಿ ಮೌಲ್ಯಗಳಿಂದ ಮಿಳಿತವಾಗಿದೆ. ನಮ್ಮ ಸಂವಿಧಾನದ ಆಶಯ ಅದರ ಪೀಠಿಕೆಯಲ್ಲಿ ವ್ಯಕ್ತವಾಗಿದ್ದು ಅದನ್ನು ಪರಿ ಪಾಲಿಸುತ್ತಾ ದೇಶ ಕಟ್ಟುವ ಕಾರ್ಯ ಯುವ ಜನತೆಯಿಂದ ಆಗಬೇಕಾಗಿದೆ ಎಂದರು.ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಭಾರತ ಸಂವಿಧಾನದ ಆಶಯ, ಅದಕ್ಕೆ ಆಧ್ಯಾತ್ಮಿಕ ಮೌಲ್ಯಗಳ ಸ್ಪರ್ಶ ಇರುವುದು ಪುರಾಣ ಇತಿಹಾಸಗಳನ್ನು ಅವಲೋಕಿಸಿದಾಗ ಅರ್ಥವಾಗುತ್ತದೆ. ಪ್ರಜೆಗಳು ಮತ್ತು ಪ್ರಭುಗಳು ಕರ್ತವ್ಯ ಪಾಲನೆಯಲ್ಲಿ ಆದರ್ಶ, ಆಶಯಗಳನ್ನು ಮರೆತ ಕಾರಣ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ವ್ಯತ್ಯಾಸ ಕಾಣುವಂತಾಗಿದೆ ಎಂದರು.
ಯುವ ಪೀಳಿಗೆಯನ್ನು ಸದೃಢ ಚಾರಿತ್ಯವಂತರನ್ನಾಗಿ ಮಾಡುವುದರ ಮೂಲಕ ಭವಿಷ್ಯದಲ್ಲಿ ನೆಮ್ಮದಿಯ ಬದುಕನ್ನು ಕಾಣಬಹುದು. ಬೌದ್ಧಿಕತೆ, ಕ್ಷಾತ್ರ ತೇಜ, ವ್ಯವಹಾರ ಮತ್ತು ಶ್ರಮದಲ್ಲಿ ವಿಕಾಸ ಅಡಗಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯಬೇಕಾಗಿದೆ. ತ್ಯಾಗಿ ಮತ್ತು ಯೋಗಿಗಳು ಹಾಕಿಕೊಟ್ಟ ಆದರ್ಶದ ಅಡಿಪಾಯದಲ್ಲಿ ದೇಶ ಕಟ್ಟುವ ಕೆಲಸ ಆಗಬೇಕಾಗಿದೆ, ಎಂದು ತಿಳಿಸಿದರು.ಭಾರತೀಯ ಕ್ರಿಕೆಟ್ ರಂಗದ ದಂತಕಥೆ ಜಿ.ಆರ್. ವಿಶ್ವನಾಥ್ ಅತಿಥಿಗಳಾಗಿ ಆಗಮಿಸಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪರವಾಗಿ ಕುಮಾರಿ ಧೀಮಹಿ ಮತ್ತು ವಿದ್ಯಾರ್ಥಿಗಳ ಪರವಾಗಿ ಚಿರಂಜೀವಿ ಕೃಷ್ಣ ರತನ್ ಮಾತನಾಡಿ, ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.ಎಲ್ಲಾ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನದಲ್ಲಿ ಪಾಲ್ಗೊಂಡು ಅತಿಥಿಗಳಿಗೆ ಗೌರವ ಮತ್ತು ರಾಷ್ಟ್ರಕ್ಕೆ ವಂದನೆಯನ್ನು ಸಲ್ಲಿಸಿದರು.