ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಮೂರು ಜೊತೆ ಸೇರಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಹೇಳಿದರು.ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಆವಿಷ್ಕಾರ ಸಂವರ್ಧನಾ ಕೇಂದ್ರ, ಎಲೆಕ್ಟ್ರಿಕ್ ವಾಹನಗಳ ಉತ್ಕೃಷ್ಟತಾ ಕೇಂದ್ರ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ರಾಷ್ಟ್ರದ ಪ್ರಗತಿಯ ದೃಷ್ಟಿಯಿಂದ ಹೇಗೆ ಬೆಳೆಸಬೇಕು ಎಂಬ ಬಗ್ಗೆ ಆಲೋಚಿಸಬೇಕು. ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನಾ ಲಹರಿಗಳು ಬೆಳವಣಿಗೆ ಕಾಣಬೇಕು. ಅಸಾಧಾರಣವಾದುದನ್ನು ಸಾಧಿಸುವುದಕ್ಕೆ ಜ್ಞಾನ ಸಂಪಾದನೆಯೊಂದಿಗೆ ಸಜ್ಜಾಗಬೇಕು ಎಂದರು.ಹೊಸ ಹೊಸ ಆವಿಷ್ಕಾರಗಳನ್ನು ಶಿಕ್ಷಣದ ಮೂಲಕ ಪರಿಚಯಿಸಲಾಗುತ್ತಿದೆ. ಅದರಿಂದ ಜ್ಞಾನವನ್ನು ಪಡೆದುಕೊಂಡು ಮತ್ತೊಂದು ಆವಿಷ್ಕಾರದ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡಬೇಕು. ಅದರ ಮೂಲಕ ದೇಶಕ್ಕೆ ಕೊಡುಗೆ ನೀಡುವ ಅವಶ್ಯಕತೆ ಇದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ ನಿಂತ ನೀರಾಗದೆ ನಿರಂತರವಾಗಿ ಬೆಳವಣಿಗೆ ಕಾಣುತ್ತಿರಬೇಕು. ಬದಲಾವಣೆಗೆ ಹೊಂದಿಕೊಳ್ಳುವುದಕ್ಕೆ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗುವಂತೆ ತಿಳಿಸಿದರು.
ಜ್ಯೋತಿರ್ ವಿಜ್ಞಾನ ಎಂದಿಗೂ ಸುಳ್ಲಾಗುವುದಿಲ್ಲ. ಭಾರತದಲ್ಲಿ ಜ್ಯೋತಿರ್ ವಿಜ್ಞಾನಕ್ಕೆ ವಿಶೇಷವಾದ ಮಹತ್ವವಿದೆ. ಅದೊಂದು ಖಗೋಳ ಶಾಸ್ತ್ರ. ಗಣಿತ ಶಾಸ್ತ್ರ. ಋಷಿ-ಮುನಿಗಳ ಕಾಲದಲ್ಲೇ ನವಗ್ರಹಗಳನ್ನು ಗುರುತಿಸಲಾಗಿತ್ತು. ಸೂರ್ಯಗ್ರಹಣ, ಚಂದ್ರಗ್ರಹಣವನ್ನು ನಿಖರವಾಗಿ ಜ್ಯೋತಿರ್ ವಿಜ್ಞಾನದಲ್ಲಿ ಗುರುತಿಸಲಾಗಿದೆ. ಹಲವಾರು ಗ್ರಹಗಳು ಒಂದೇ ಪಥದಲ್ಲಿ ಕಾಣಿಸಿಕೊಳ್ಳುವುದು. ಅದೇ ಸಮಯಕ್ಕೆ ಮಹಾಕುಂಭಮೇಳ ನಡೆಯುವುದು. ಇವೆಲ್ಲವೂ ಭಾರತೀಯರಲ್ಲಿರುವ ಆಧ್ಯಾತ್ಮಿಕ ಶಕ್ತಿ, ಚಿಂತನೆಗಳಿಗೆ ಸಾಕ್ಷೀಭೂತವಾಗಿದೆ ಎಂದು ನುಡಿದರು.ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳವಣಿಗೆ ಕಾಣಬೇಕು. ಅದರಿಂದ ನಮ್ಮ ಆಲೋಚನಾ ಲಹರಿ ವಿಸ್ತಾರಗೊಳ್ಳುತ್ತದೆ. ಹೊಸ ಹೊಸ ಆಲೋಚನೆಗಳು ಮೂಡಿ ಮತ್ತೇನನ್ನೋ ಸಾಧಿಸುವುದಕ್ಕೆ ಪ್ರೇರಣೆ ನೀಡುತ್ತದೆ. ರಾಷ್ಟ್ರದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆ ತರುವುದಕ್ಕೆ ಕೈಜೋಡಿಸಬೇಕು ಎಂದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ನಾವು ಕಟ್ಟಡ ಕಟ್ಟುವುದು, ಶಿಕ್ಷಣದ ಹೊಸ ವಿಭಾಗಗಳನ್ನು ತೆರೆಯುವುದು ಮುಖ್ಯವಲ್ಲ. ಆ ವಿಷಯಗಳತ್ತ ವಿದ್ಯಾರ್ಥಿಗಳನ್ನು ಹೇಗೆ ಆಕರ್ಷಿಸುತ್ತೇವೆ, ಅವರಿಗೆ ಮನಮುಟ್ಟುವಂತೆ ಹೇಗೆ ಬೋಧನೆ ಮಾಡುತ್ತೇವೆ ಎನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಬೋಧಕರು ಹೆಚ್ಚಿನ ಪರಿಶ್ರಮ ವಹಿಸಬೇಕು ಎಂದರು.ನಾಟಕವಾಡಿದ ದುಡ್ಡಿನಿಂದ ಕಟ್ಟಿದ ಸಂಸ್ಥೆ ಇದು. ಹೆಮ್ಮರವಾಗಿ ಬೆಳೆಯುವುದಕ್ಕೆ ಕೆ.ವಿ.ಶಂಕರಗೌಡರು, ಹೆಚ್.ಡಿ.ಚೌಡಯ್ಯನವರು ಅಪಾರವಾಗಿ ಶ್ರಮಿಸಿದ್ದಾರೆ. ಅದನ್ನು ಮತ್ತಷ್ಟು ಬೆಳವಣಿಗೆಯತ್ತ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಅರ್ಥ ಮಾಡಿಕೊಂಡು ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಎಸ್.ಎಲ್.ಶಿವಪ್ರಸಾದ್, ಬಿಜಿಎಸ್ ಮತ್ತು ಎಸ್‌ಜೆಪಿ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಪುಟ್ಟರಾಜು, ಪ್ರಾಂಶುಪಾಲ ಡಾ.ಮುರಳಿ ಕೃಷ್ಣ, ಉಪಪ್ರಾಂಶುಪಾಲ ಡಾ.ಎಸ್.ವಿನಯ್ ಮತ್ತು ಆಡಳಿತ ಮಂಡಳಿ ಸದಸ್ಯರಿದ್ದರು.