ಸಾರಾಂಶ
ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.ಪಟ್ಟೇಗಾರಪಾಳ್ಯ ನಿವಾಸಿಗಳಾದ ಪ್ರಕಾಶ್ ಹಾಗೂ ಪಾರಿಜಾತಾ ಎಂಬುವರನ್ನು ಬಂಧಿಸಿರುವ ಪೊಲೀಸರು, ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿದ್ದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ಆರೋಪಿಗಳು ತಮ್ಮ ಹೆಸರನ್ನು ರಾಕೇಶ್ ಮತ್ತು ಪೂಜಾ ಎಂದು ಬದಲಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ ಭರವಸೆ ನೀಡುತ್ತಿದ್ದರು. ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ನೆರೆಯ ತಮಿಳುನಾಡು ಮತ್ತು ಪಾಂಡಿಚೇರಿಗೆ ಕರೆದೊಯ್ದು ಹಣದ ಆಮಿಷವೊಡ್ಡಿ ಅಲ್ಲಿನ ರೆಸಾರ್ಟ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು.ರೆಸಾರ್ಟ್‌ಗಳಲ್ಲಿ ನಡೆಯುವ ಬರುವ ಪಾರ್ಟಿಗಳಿಗೆ ಉದ್ಯಮಿಗಳು, ಶ್ರೀಮಂತ ವ್ಯಕ್ತಿಗಳಿಂದ ₹25-50 ಸಾವಿರ ಪಡೆದು ಈ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಕಳುಹಿಸುತ್ತಿದ್ದರು. ಇತ್ತೀಚೆಗೆ ಈ ವೇಶ್ಯಾವಾಟಿಕೆ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.