ಸಾರಾಂಶ
ಕನ್ನಡಪ್ರಭ ವಾರ್ತೆ ಮೂರ್ನಾಡು
ಮೂರ್ನಾಡುವಿನಲ್ಲಿ ತ್ರಿನೇತ್ರ ವಾಹನ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ಅತಿ ವಿಜೃಂಭಣೆಯಿಂದ ಜರುಗಿತು. ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಅಲಂಕೃತ ವೇದಿಕೆಯಲ್ಲಿ ೩೧ನೇ ವರ್ಷದ ಆಯುಧ ಪೂಜೆ ನಡೆಯಿತು. ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯನ್ನು ನೆರವೇರಿಸಲಾಯಿತು. ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ವಯನಾಡ್ ದುರಂತ, ಹುಲ್ಲಿನ ಗುಡಿಸಲು, ಕಾಡು ಉಳಿಸಿ ನಾಡು ಬೆಳೆಸಿ, ದೇವಿ ಮಹಾತ್ಮೆ, ರೌದ್ರರೂಪ ಗಣಪತಿ, ಶಿವನಿಂದ ತ್ರಿಪುರಾಸುರನ ವಧೆ, ದೇವಿಯಿಂದ ಗಜಾಸುರನ ಸಂಹಾರ ಚಿತ್ರಣಗಳು, ಆನೆ ತುಳಿತಕ್ಕೆ ರೈತ ಸಾವು, ರಾಮಾಂಜನೇಯ ದರ್ಶನಂ ಹೀಗೆ ಇನ್ನು ಹಲವಾರು ಸ್ತಬ್ಧಚಿತ್ರಗಳು ಮತ್ತು ವಿಟ್ಲದ ರಸಿಕ ಗೊಂಬೆ ಬಳಗದ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಗಳು ನೋಡುಗರ ಗಮನ ಸೆಳೆದವು.
ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದುಷ್ಟರ ಸಂಹಾರ ಮಾಡಿ ಶಿಷ್ಟರ ರಕ್ಷಣೆಗೈದ ನಾಡಹಬ್ಬವನ್ನು ರಾಜ್ಯಾದ್ಯಂತ ಆಚರಿಸುವುದು ಒಗ್ಗಟ್ಟಿನ ಸಂಕೇತವಾಗಿದೆ ಎಂದರು. ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ದೇವರ ಅಥವಾ ಹಿರಿಯರ ಫೋಟೋಗಳನ್ನು ನೋಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿ. ಕೆಲವರು ಅಂಗೈ ನೋಡುತ್ತಾರೆ. ನಮ್ಮ ಕೈಗಳಲ್ಲಿ ಲಕ್ಷ್ಮಿ, ಸರಸ್ವತಿ, ಶಕ್ತಿರೂಪಿಣಿ ದುರ್ಗೆ ಇದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಸ್ತ್ರೀರೂಪಿ ದೇವರುಗಳನ್ನು ಆರಾಧನೆ ಮಾಡುತ್ತಾ ಬರಲಾಗಿದೆ. ನಾವು ಭೂಮಿಯಲ್ಲಿ ದೇವರನ್ನು ಕಾಣುತ್ತೇವೆ. ರಾಜ್ಯೋತ್ಸವದಂದು ಮಾತೆ ಭುವನೇಶ್ವರಿಯನ್ನು ಆರಾಧಿಸುತ್ತೇವೆ. ಕೊಡಗಿನಲ್ಲಿ ಕಾವೇರಿಯನ್ನು ಆರಾಧಿಸುತ್ತೇವೆ. ಹೆಣ್ಣಿಗೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಿದ ಸಂಸ್ಕೃತಿಯನ್ನು ಹೊಂದಿರುವುದು ಹಿಂದೂ ಸಂಸ್ಕೃತಿ ಎಂದ ಪ್ರತಾಪ್ ಸಿಂಹ, ದೇವಾನುದೇವತೆಗಳ ಆರಾಧನೆಯಿಂದ ಜೀವನದಲ್ಲಿ ಸರ್ವರಿಗೂ ಸುಭಿಕ್ಷ ನೀಡುವಂತಾಗಲಿ, ದುಃಖ ದುಮ್ಮಾನಗಳನ್ನು ದೂರವಾಗಲಿ ಎಂದರು.ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಿದ್ದರು.
ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ವಿರಾಜಪೇಟೆ ಆಶೀರ್ವಾದ್ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಗೌರವ್ ಅಯ್ಯಪ್ಪ, ಪಿಡಬ್ಲ್ಯೂಡಿ ಇಲಾಖೆಯ ಕೋಳುಮಾಡಂಡ ಮಣಿ ಚಂಗಪ್ಪ, ಮೂರ್ನಾಡು ಹಿಂದೂ ರುದ್ರಭೂಮಿ ಅಧ್ಯಕ್ಷ ಬಿ.ಎಸ್. ಅರುಣ್ ರೈ, ಸಂಘದ ಗೌರವಾಧ್ಯಕ್ಷ ಎನ್.ಕೆ. ರಾಮ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು, ಬಂಟರ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ರೈ, ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮೂರ್ನಾಡು ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್, ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಗೌಡ ಸಮಾಜ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಆರೋಗ್ಯ ಕಾರ್ಯಕರ್ತೆ ಬೊಟ್ಟೋಳಂಡ ಕಾವೇರಮ್ಮ ನಾಣಯ್ಯ, ಅಯ್ಯಪ್ಪ ಯುವಕ ಮಂಡಳಿಯ ಅಧ್ಯಕ್ಷ ಕಂಬೀರಂಡ ಕೆ. ಸತೀಶ್ ಮುತ್ತಪ್ಪ, ಮೂರ್ನಾಡು ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಸಂಘದ ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಎಚ್.ಎಚ್. ಜಯಂತ್ ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ: ಸಭಾ ಕಾರ್ಯಕ್ರಮದಲ್ಲಿ ಮರಗೋಡು ಮಾಜಿ ಸೈನಿಕ, ಫೀ.ಮಾ. ಜ. ಕೆ.ಎಂ. ಕಾರ್ಯಪ್ಪ ರಾಜ್ಯ ಪ್ರಶಸ್ತಿ ವಿಜೇತರಾದ ಕ್ಯಾಪ್ಟನ್ ಹೊಸೊಕ್ಲು ಚಿಣ್ಣಪ್ಪ, ನಿವೃತ್ತ ದೈಹಿಕ ಶಿಕ್ಷಕ ಚೆಯ್ಯಂಡ ರಘು ತಿಮ್ಮಯ್ಯ ಹಾಗೂ ನಿವೃತ್ತ ಪೊಲೀಸ್ ಉಪನಿರೀಕ್ಷರಾದ ಕೆ.ಎಂ. ಸದಾಶಿವ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಅಲಂಕೃತಗೊಂಡ ಮೋಟಾರು ರಹಿತ ದ್ವಿಚಕ್ರ (ಸೈಕಲ್), ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ಆಂಗೀರ ಕುಸುಮ ಮಾದಪ್ಪ ಪ್ರಾರ್ಥಿಸಿದರು. ಎನ್.ಎನ್. ಶರಣು ವರದಿ ವಾಚಿಸಿದರು. ಅಶ್ವಥ್ ರೈ ಸ್ವಾಗತಿಸಿದರು. ಹರ್ಷಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.