ಸಾರಾಂಶ
ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ವರುಣ ಆರ್ಭಟ ಶನಿವಾರ ಕೂಡ ಮುಂದುವರಿಯಿತು. ಕಳೆದ ನಾಲ್ಕೈದು ದಿನಗಳಿಂದ ಆಗಾಗ ಬರುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಣ್ಣಿಹಳ್ಳ-ತುಪರಿಹಳ್ಳಗಳಿಗೆ ಹೆಚ್ಚುವರಿ ನೀರು ಹರಿದು ಬಂದು ಹಳ್ಳದ ಅಕ್ಕಪಕ್ಕದಲ್ಲಿ ಆತಂಕ ಸೃಷ್ಟಿಸುತ್ತಿದೆ. ಕಳೆದ 24ಗಂಟೆಗಳಲ್ಲಿ 98 ಮನೆಗಳು ಭಾಗಶಃ ಕುಸಿದಿವೆ. ಬೆಣ್ಣಿಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.ಕಳೆದ ನಾಲ್ಕೈದು ದಿನಗಳಿಂದ ವರುಣನ ಆರ್ಭಟ ಜೋರಾಗಿಯೇ ಇದೆ. ರಾತ್ರಿಯಿಡೀ ಸುರಿದು ಬೆಳಗ್ಗೆ ಮತ್ತು ಮಧ್ಯಾಹ್ನ ಬಿಡುವು ನೀಡುವ ಮಳೆರಾಯ, ಮತ್ತೆ ರಾತ್ರಿ ನಂತರ ಶುರುವಾಗುತ್ತಿದೆ. ಮಳೆರಾಯನ ಅಬ್ಬರಕ್ಕೆ ಜನತೆ ಅಕ್ಷರಶಃ ಹೈರಾಣಾಗುತ್ತಿದೆ. ಶುಕ್ರವಾರ ರಾತ್ರಿ 8ರ ಸುಮಾರಿಗೆ ಶುರುವಾಗಿದ್ದ ಮಳೆಯು ರಾತ್ರಿಯೆಲ್ಲ ಸುರಿದಿದೆ. ಶುಕ್ರವಾರದಿಂದ ಶನಿವಾರ ಬೆಳಗ್ಗೆ ವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 27.9 ಮಿಮೀ ಮಳೆ ಸುರಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
98 ಮನೆಗಳ ಹಾನಿ:ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 98 ಮನೆಗಳು ಕುಸಿದಿವೆ. ಅದರಲ್ಲಿ 7 ಮನೆ ಪೂರ್ಣ ಕುಸಿದಿದ್ದರೆ, 91 ಮನೆ ಭಾಗಶಃ ಕುಸಿದಿವೆ. ಇದರಲ್ಲಿ ನವಲಗುಂದ ತಾಲೂಕಿನಲ್ಲಿ 47 ಮನೆ ಕುಸಿದಿದ್ದರೆ, ಧಾರವಾಡದಲ್ಲಿ 35, ಹುಬ್ಬಳ್ಳಿ- 5, ಕುಂದಗೋಳ- 7, ಅಣ್ಣಿಗೇರಿ- 4 ಸೇರಿದಂತೆ ಬರೋಬ್ಬರಿ 98 ಮನೆ ಕುಸಿದಿವೆ. ಅಣ್ಣಿಗೇರಿಯ ನಾಗರಹಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಹೋರಿಯೊಂದು ಮೃತಪಟ್ಟಿದೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಹೈರಾಣಾಗಿದ್ದಾರೆ. ಅದರಲ್ಲಿ ನವಲಗುಂದ ತಾಲೂಕಿನಲ್ಲಿಯೇ 130ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿ:ಈ ನಡುವೆ ಹೊಲಕ್ಕೆ ಹೋಗಿದ್ದ ಮಂಟೂರು ಗ್ರಾಮದ ವ್ಯಕ್ತಿಯೊಬ್ಬ ಬೆಣ್ಣಿಹಳ್ಳದಲ್ಲಿ ಸಿಲುಕಿದ್ದ. ಆತನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ 4 ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕಾಳಜಿ ಕೇಂದ್ರ:ಈ ನಡುವೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಬಾವಿಕಟ್ಟಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಮುಂಜಾಗ್ರತೆ:ಬೆಣ್ಣಿಹಳ್ಳ-ತುಪರಿಹಳ್ಳಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಳ್ಳದ ಅಕ್ಕಪಕ್ಕದ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮಣ್ಣಿನ ಮನೆಗಳು ಹೆಚ್ಚಾಗಿ ಕುಸಿಯುತ್ತಿವೆ. ಆದಕಾರಣ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆಯಿಂದಿರಬೇಕು. ಇದರೊಂದಿಗೆ ಹಳ್ಳಗಳೆಲ್ಲ ಮೈದುಂಬಿ ಹರಿಯುತ್ತಿದ್ದು, ಅದರ ಅಕ್ಕಪಕ್ಕಗಳಲ್ಲಿ ಹೋಗುವಾಗು ಜಾಗ್ರತರಾಗಿರಬೇಕು ಎಂಬ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ.
ಇನ್ನೊಂದೆಡೆ ಅಧಿಕಾರಿಗಳು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.