ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಮಧ್ಯ ಕರ್ನಾಟಕದ ದಸರಾ ಉತ್ಸವವೆಂದೇ ಬಿಂಬಿತಗೊಂಡ ಶರಣ ಸಂಸ್ಕೃತಿ ಉತ್ಸವದ ಜಾನಪದ ಕಲಾ ತಂಡಗಳ ಮೆರವಣಿಯನ್ನು ಕೋಟೆ ನಾಡು ಚಿತ್ರದುರ್ಗದಲ್ಲಿ ಶನಿವಾರ ಅತ್ಯಂತ ವೈಭೋಗದಿಂದ ನೆರವೇರಿಸಲಾಯಿತು. ಮುರುಘಾಮಠದ ಪರಂಪರೆ ಗುರುವಾದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗಳ ಬೆಳ್ಳಿ ಪುತ್ಥಳಿಯನ್ನು ಪುಷ್ಪಾಲಂಕೃತ ಸಾರೋಟ್ ನಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.ಬೆಳಿಗ್ಗೆ 10-30ಕ್ಕೆ ಶರಣಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳಕ್ಕೆ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮುರುಘಾಮಠದ ಆವರಣದಲ್ಲಿ ಚಾಲನೆ ನೀಡಿದರು. ಬಳಿಕ ವಿವಿಧ ಪ್ರಕಾರದ ನೂರಾರು ಜಾನಪದ ಕಲಾತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದ ದೃಶ್ಯ ಸುಮಾರು ಮೂರು ಕಿಲೋಮೀಟರ್‌ನಷ್ಟು ಉದ್ದವಿತ್ತು.
ಪುಷ್ಪಾಲಾಂಕೃತ ಸಾರೋಟಿನಲ್ಲಿ ಜಯದೇವ ಜಗದ್ಗುರುಗಳ ಮೂರ್ತಿ, ಜಯದೇವ ಶ್ರೀಗಳ ಬೆಳ್ಳಿ ಪ್ರತಿಮೆ ಇರಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪುಷ್ಪಾಲಂಕೃತ ಸಾರೋಟ್ ಮುಂಭಾಗದಲ್ಲಿ ನಾಸಿಕ್ ಡೋಲು , ಛತ್ರಿ ಚಾಮರ, ಸೋಮನ ಕುಣಿತ, ಝಾಂಜ್ ಮೇಳ, ತಮಟೆ ವಾದ್ಯ, ಮಹಿಳಾ ತಮಟೆ ವಾದ್ಯ, ಕತ್ತಿಗುರಾಣಿ ಕುಣಿತ, ಹಾವೇರಿ ಜಿಲ್ಲೆಯ ಝಾಂಜ್ ಪಥಕ, ಉರುಮೆ, ಬ್ರಾಸ್ ಬ್ಯಾಂಡ್‌ವಾದ್ಯ, ಕೀಲುಕುದುರೆ, ವೀರ ಮಕ್ಕಳ ಕುಣಿತ ನೋಡುಗರ ಗಮನ ಸೆಳೆಯಿತು.ಭರ್ಚಿ ಕುಣಿತ, ಪುರುಷರ ಡೊಳ್ಳು ಕುಣಿತ, ಖಾಸ ಬೇಡರ ಪಡೆ, ಗಾರುಡಿ ಗೊಂಬೆ, ಲಂಬಾಣಿ ನೃತ್ಯ, ಭೂತನ ಕುಣಿತ, ಕೊಂಬು ಕಹಳೆ, ಟಕೂರಿ ವಾದ್ಯ, ನಂದಿಕೋಲು ಸಮಾಳ, ಡ್ರಮ್ ಸೆಟ್ ವಾದ್ಯ, ತ್ರಾಷ್ ವಾದ್ಯ, ಹಗಲು ವೇಷ, ಮೇಳ ವಾದ್ಯ, ಬ್ಯಾಂಜೋ, ಛತ್ರಿ ಕುಣಿತ, ಹರಿಗೆ ಕುಣಿತ, ಕರಡಿ ಚಮಾಳ ವಾದ್ಯ, ಡೊಳ್ಳು, ಗೊರವರಕುಣಿತ, ಕೋಲಾಟ ಹೀಗೆ ಹಲವಾರು ತಂಡಗಳು ತಮ್ಮದೇ ಆದ ಕಲೆಗಳನ್ನು ಪ್ರದರ್ಶಿಸುತ್ತಾ ಸಾಗುತ್ತಿದ್ದ ದೃಶ್ಯ, ರಸ್ತೆ ಬದಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ಜನತೆಗೆ ಖುಷಿ ಕೊಟ್ಟಿತು.
12ನೇ ಶತಮಾನದ ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಗೋಸಲ ಸಿದ್ದೇಶ್ವರ ಶ್ರೀ, ಗೋಸಲ ಚನ್ನಬಸವೇಶ್ವರ ಶ್ರೀ, ತೋಂಟದ ಸಿದ್ದಲಿಂಗೇಶ್ವರ ಶ್ರೀ, ಗುಮ್ಮಾಳಪುರದ ಸಿದ್ದಲಿಂಗ ಶ್ರೀ, ಕಟ್ಟಿಗೆಹಳ್ಳಿ ಸಿದ್ದಲಿಂಗ ಶ್ರೀ, ಮುರಿಗೆ ಶಾಂತವೀರ ದೇಶಿಕರು (ಒಂದನೇ ಮುರಿಗೆ ಸ್ವಾಮಿಗಳು), ಗುರುಸಿದ್ದ ಶ್ರೀ (ಇಮ್ಮಡಿ ಮುರಿಗೆ ಸ್ವಾಮಿಗಳು) ಸ್ವಾದಿ ಚನ್ನಬಸವ ಶ್ರೀ, ಮೂರುಸಾವಿರದ (ಸಣ್ಣ ಗುರುಪಾದಸ್ವಾಮಿಗಳು), ಮೂರುಸಾವಿರದ ಸಿದ್ದಲಿಂಗ ಶ್ರೀ, ಒಪ್ಪೊತ್ತಿನ ಚನ್ನವೀರ ಶ್ರೀ, ವ್ಯಾಕರಣದ ಶ್ರೀ, ನೈಘಂಟಿನ ಸಿದ್ದಬಸವ ಶ್ರೀ, ಸಣ್ಣ ಬರಹದ ರಾಚವಟ್ಟಿ ಶ್ರೀ, ಮೃತ್ಯುಂಜಯ ಅಪ್ಪರ ಭಾವಚಿತ್ರಗಳು ಜನರನ್ನು ಆಕರ್ಷಿಸಿದವು.ಶರಣ ಸಂಸ್ಕೃತಿ ಉತ್ಸವದ ಪುಷ್ಪಾಲಂಕೃತ ಸಾರೋಟ್ ಶ್ರೀಮಠದಿಂದ ಹೊರಟು ಸಂತೆಪೇಟೆ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಬಸವ ಮಂಟಪರಸ್ತೆ, ರಂಗಯ್ಯನ ಬಾಗಿಲು, ರಾಜಬೀದಿಮೂಲಕ ಸಾಗಿ ಕೋಟೆಯ ಮೇಲುದುರ್ಗದಲ್ಲಿ ಅಂತ್ಯಗೊಂಡಿತು.
ಶರಣ ಸಂಸ್ಕೃತಿ ಉತ್ಸವ ಮೇಳದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಶ್ರೀ, ಮಾದಾರ ಚೆನ್ನಯ್ಯ ಶ್ರೀ, ಡಾ. ಬಸವಪ್ರಭು ಶ್ರೀ, ಇಳಕಲ್ ಗುರುಮಹಾಂತ ಶ್ರೀ, ಗುರುಮಠಕಲ್ ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಡಾ. ಬಸವ ರಮಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀ, ಆಡಳಿತಮಂಡಳಿ ಸದಸ್ಯ ಎಸ್.ಎನ್ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ ತಾಜ್ ಪೀರ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಹರಗುರು ಚರಮೂರ್ತಿಗಳು, ಎಸ್ ಜೆಎಂ ವಿದ್ಯಾಪೀಠದ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ವಿವಿಧಜಾತಿ, ಧರ್ಮದ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.