ನಕಲಿ ಪತ್ರಕರ್ತರಿಗೆ ಕಡಿವಾಣ ಅತ್ಯಗತ್ಯ

| Published : Jul 29 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪತ್ರಕರ್ತರು ಎಂದು ಹೇಳಿ ಬ್ಲಾಕ್‌ಮೇಲ್ ಮಾಡುವವರ ಸಂಖ್ಯೆ ಹೆಚ್ಚಿದ್ದು, ವೃತ್ತಿಗೆ ದ್ರೋಹ ಎಸಗುವ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ. ಒಂದು ದಿನ ಪತ್ರಿಕೆ ಹೊರತಂದು ಪತ್ರಕರ್ತ ಎಂದು ಹೇಳಿಕೊಳ್ಳುವವರಿದ್ದಾರೆ ಎಂದು ಕಾ.ಪ.ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು. ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪತ್ರಕರ್ತರು ಎಂದು ಹೇಳಿ ಬ್ಲಾಕ್‌ಮೇಲ್ ಮಾಡುವವರ ಸಂಖ್ಯೆ ಹೆಚ್ಚಿದ್ದು, ವೃತ್ತಿಗೆ ದ್ರೋಹ ಎಸಗುವ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ. ಒಂದು ದಿನ ಪತ್ರಿಕೆ ಹೊರತಂದು ಪತ್ರಕರ್ತ ಎಂದು ಹೇಳಿಕೊಳ್ಳುವವರಿದ್ದಾರೆ ಎಂದು ಕಾ.ಪ.ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ರೇಕಿಂಗ್ ಅಬ್ಬರದಲ್ಲಿ ಪತ್ರಕರ್ತರ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಒಂದೆಡೆಯಾದರೆ, ನಾನು ಪತ್ರಕರ್ತ, ನಾನು ಪತ್ರಕರ್ತ ಎಂದು ಹೇಳುವವರ ಸಂಖ್ಯೆ ಅಧಿಕವಾಗುತ್ತಿದೆ, ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಶ್ರೇಷ್ಠ ಸಾಹಿತಿ ಡಾ.ಡಿ.ವಿ.ಗುಂಡಪ್ಪ ಅವರು ಸ್ಥಾಪಿಸಿದ ಕಾನಿಪ ಇಂದು ಹೆಮ್ಮರವಾಗಿ ಬೆಳೆದು ಕೇರಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿದೆ. ಖಾದ್ರಿ ಶಾಮಣ್ಣ, ಎಸ್.ವಿ. ಜಯಶೀಲ್‌ರಾವ್ ಸೇರಿದಂತೆ ಅನೇಕ ಮಹಾನುಭಾವರು ಸಂಘವನ್ನು ಎತ್ತರಕ್ಕೆ ಬೆಳೆಸಿದ್ದಾರೆ.ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಎಂ.ಎಸ್.ಮಧಬಾವಿ ಉಪನ್ಯಾಸ ನೀಡಿದರು. ಶಾಸ್ತ್ರೀಯ ಪದ್ಧತಿಯಲ್ಲಿ ವಚನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸಿದ ಶ್ರೇಯಸ್ಸು ಡಾ.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಶಿವಾನುಭವ ಎಂಬ ಪತ್ರಿಕೆಯ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಬಿತ್ತಿದರೆ, ಅವರು ಸ್ಥಾಪಿಸಿದ ನವ ಕರ್ನಾಟಕ ಪತ್ರಿಕೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯ ಕೈಗನ್ನಡಿಯಾಗಿದೆ ಎಂದು ತಿಳಿಸಿದರು..ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖ ಮಣೂರ, ಪ್ರಕಾಶ ಬೆಣ್ಣೂರ, ಪಿರೋಜ್ ರೋಜಿನದಾರ, ಪದಾದಿಕಾರಿಗಳಾದ ಅವಿನಾಶ ಬಿದರಿ, ಶಕೀಲ್ ಬಾಗಮಾರೆ, ಮಲ್ಲು ಕೆಂಭಾವಿ, ರಾಹುಲ್ ಅಪ್ಟೆ, ದೀಪ ಶಿಂತ್ರೆ, ಐಎಫ್‌ಡಬ್ಲ್ಯೂಜೆ ನಾಮನಿರ್ದೇಶಿತ ಸದಸ್ಯ ಮಹೇಶ ಶೆಟಗಾರ, ಕೆ.ಕೆ.ಕುಲಕರ್ಣಿ, ಕೌಶಲ್ಯಾ ಪನಾಳಕರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಇದ್ದರು. ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು. ಕಾನಿಪ ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ ನಿರೂಪಿಸಿದರು.

----------------------------------------

ಕೋಟ್‌ಸದನದಲ್ಲಿ ಪತ್ರಕರ್ತರ ಹಿತರಕ್ಷಣೆಯ ಬಗ್ಗೆ ಚರ್ಚೆಯಾಗುತ್ತಿದೆ. ಪತ್ರಕರ್ತರ ಹಿತರಕ್ಷಣೆಗೆ ಪೂರಕ ಸೌಲಭ್ಯ ಕಲ್ಪಿಸುವಂತೆ ಸರ್ಕಾರ, ಸಂಬಂಧಿಸಿದ ಇಲಾಖೆಗಳಿಗೆ ನಿರಂತರವಾಗಿ ಸಂಘ ಮನವಿ ಮಾಡುತ್ತಿದೆ. ಮಾಧ್ಯಮಕ್ಕೆ ಅದಮ್ಯ ಶಕ್ತಿ ಇದೆ, ದೊಡ್ಡ ಜವಾಬ್ದಾರಿ ಇದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಹ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದರು.ಶಿವಾನಂದ ತಗಡೂರು,ರಾಜ್ಯಾಧ್ಯಕ್ಷರು ಕಾ.ಪ.ಸಂಘ