ಸಾರಾಂಶ
ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಮೃತಪಟ್ಟಿರುವಂತಹ ಘಟನೆ ಸಮೀಪದ ಅಜ್ಜಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ
ಕನ್ನಡಪ್ರಭ ವಾರ್ತೆ ಹನೂರು
ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಮೃತಪಟ್ಟಿರುವಂತಹ ಘಟನೆ ಸಮೀಪದ ಅಜ್ಜಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಕಳೆದ ಎರಡು ದಿನಗಳ ಹಿಂದೆ ತಾಯಿ ಕರಡಿಯಿಂದ ಬೇರ್ಪಟ್ಟಿದ್ದ ಆರು ತಿಂಗಳ ಮರಿ ಕರಡಿಯು ಮಲೆಮಹದೇಶ್ವರ ವನ್ಯಧಾಮದ ಅಜ್ಜಿಪುರ ರಸ್ತೆಯಲ್ಲಿ ಅಸ್ವಸ್ಥಗೊಂಡು ಎರಡು ಕಲ್ಲುಗಳ ನಡುವೆ ಸೇರಿಕೊಂಡಿತ್ತು. ನಂತರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಅಧಿಕಾರಿಗಳು ಆಗಮಿಸಿ ತಾಯಿಯ ಜೊತೆ ಮರಿ ಕರಡಿಯನ್ನು ಸೇರಿಸಲು ಪ್ರಯತ್ನಿಸಿದರು.ಮರಿ ಕರಡಿ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಘಟನಾ ಸ್ಧಳಕ್ಕೆ ಭೇಟಿ ನೀಡಿ ಮರಿ ಕರಡಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು.
ಸೋಮವಾರ ತಾಯಿಯಿಂದ ಬೇರ್ಪಟ್ಟ ಕರಡಿ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕಲ್ಲು ಬಂಡೆಗಳ ನಡುವೆ ಇರುವುದನ್ನು ಸಾರ್ವಜನಿಕರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಕರಡಿಮರಿ ಸೂಕ್ತ ಚಿಕಿತ್ಸೆ ಸಿಗದೇ ಇತ್ತ ತಾಯಿಯಿಂದ ಬೇರ್ಪಟ್ಟು ಮರಿ ಕರಡಿ ಆತಂಕದಲ್ಲೇ ಸಾವನ್ನಪ್ಪಿದೆ ಎಂದು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು, ಎಸಿಎಫ್ ಶಿವರಾಮ್ , ವಲಯ ಅರಣ್ಯ ಅಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.