ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕೋಟೆನಾಡು ಚಿತ್ರದುರ್ಗ ಸಜ್ಜಾಗಿದೆ. ಬಿಎಸ್‌ವೈ ಪುರಪ್ರವೇಶಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಚಿತ್ರದುರ್ಗ : ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕೋಟೆನಾಡು ಚಿತ್ರದುರ್ಗ ಸಜ್ಜಾಗಿದೆ. ಬಿಎಸ್‌ವೈ ಪುರಪ್ರವೇಶಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಮೇ 8ರ ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರು ಸಾಂಪ್ರದಾಯಿಕ ರಾಶಿ ಪೂಜೆ ಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಕನಕದಾಸ ವೃತ್ತದ ಸಮೀಪದ ಚಂದ್ರವಳ್ಳಿ ಮೈದಾನದಿಂದ ಸಾಗುವ ಮೆರವಣಿಗೆಯಲ್ಲಿ ಯಡಿಯೂರಪ್ಪನವರನ್ನು ಪುಷ್ಪಾಲಂಕೃತ ಸಾರೋಟ್‌ನಲ್ಲಿ ಕುಳ್ಳರಿಸಿ ಮೆರವಣಿಗೆಯಲ್ಲಿ ಕರೆ ತರಲಾಗುವುದು.
2000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಬರಲಿದ್ದಾರೆ
2000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ ವಂದನ್ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜನಪದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
ಅಂಬಾಸಿಡರ್ ಕಾರು CKR 45 ಸಹ ಪ್ರಮುಖ ಆಕರ್ಷಣೆ
ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್ ಕಾರು CKR 45) ಸಹ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ವಿಶೇಷ ಮೆರಗು ನೀಡಲು ಹಾಗೂ ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮೀ, ಹೆಣ್ಣುಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ. ನಾಡಿನ ಹೆಸರಾಂತ ಕಲಾವಿದರು ಈ ಸ್ತಬ್ಧ ಚಿತ್ರಗಳನ್ನು ರೂಪಿಸುತ್ತಿದ್ದಾರೆ.
ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಶ್ರೀರಾಮುಲು ಅವರೂ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
