ಕೇಂದ್ರ ಸರ್ಕಾರವು ನ.30 ರಿಂದ ಕರೆದಿರುವ ವಿಶೇಷ ಸಂಸತ್ ಅಧಿವೇಶನ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯ ಕುರಿತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರ ಸರ್ಕಾರವು ನ.30 ರಿಂದ ಕರೆದಿರುವ ವಿಶೇಷ ಸಂಸತ್ ಅಧಿವೇಶನ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯ ಕುರಿತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸೂದೆಯ ಕರಡು ನೀಡದೆ ಅದರ ಚರ್ಚೆಗೆ ಮುಂದಾಗಿದ್ದಾರೆ. ಇಷ್ಟೊಂದು ಆತುರ ಯಾಕೆಂದು ಈ ಪ್ರಕ್ರಿಯೆಯ ಉದ್ದೇಶ ಮತ್ತು ಪಾರದರ್ಶಕತೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಮಸೂದೆ ಸಂಪೂರ್ಣ ಅವೈಜ್ಞಾನಿಕ ಎಂದು ಟೀಕಿಸಿರುವ ಖರ್ಗೆ, 2027ರಲ್ಲಿ ಜನಗಣತಿ ಪೂರ್ಣಗೊಳ್ಳಲಿದ್ದರೂ 2011ರ ಜನಗಣತಿಯ ಆಧಾರದ ಮೇಲೆ 2051ರವರೆಗೆ ಮೀಸಲಾತಿ ನಿಗದಿಪಡಿಸುವ ತರಾತುರಿ ಏಕಿದೆ ಎಂದು ಪ್ರಶ್ನಿಸಿದ್ದಾರೆ.ಸೋಲಿನ ಭಯದಿಂದ ತಮ್ಮ ರಾಜಕೀಯ ಲಾಭಕ್ಕೆ ತಕ್ಕಂತೆ ಕ್ಷೇತ್ರಗಳ ಗಡಿ ಬದಲಿಸಿ, ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ಮಸೂದೆ ಅಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.

2011 ರ ಜನಗಣತಿ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿದರೆ, ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಸತ್ತಿನ ಪ್ರಾತಿನಿಧ್ಯದಲ್ಲಿ ದೊಡ್ಡ ಅನ್ಯಾಯವಾಗಲಿದೆ ಎಂದು ಆತಂಕ ಹೊರಹಕಿದರು.ಮಹಿಳಾ ಮೀಸಲಾತಿಗೆ ತಳುಕು ಹಾಕಿದ್ದೇಕೆ? ಮಹಿಳಾ ಮೀಸಲಾತಿ ಮಸೂದೆಗೆ ಈಗಾಗಲೇ ಸಂಸತ್ತಿನಲ್ಲಿ ಸರ್ವಾನುಮತದ ಅನುಮೋದನೆ ಸಿಕ್ಕಿದೆ. ಅದನ್ನು ತಕ್ಷಣವೇ ಜಾರಿಗೆ ತರಲು ಯಾವುದೇ ಅಡ್ಡಿಯಿಲ್ಲದಿದ್ದರೂ, ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಏಕೆ ಜೋಡಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಖರ್ಗೆ, ಯಾವುದೇ ರಾಜಕೀಯ ಪಕ್ಷಗಳಿಗೆ ಅಥವಾ ಸಾರ್ವಜನಿಕರಿಗೆ ಮಸೂದೆಯ ಕರಡು ಪ್ರತಿ ನೀಡದೆ ಮತ್ತು ಸಾಧಕ-ಬಾಧಕಗಳ ಚರ್ಚೆ ನಡೆಸದೆ ತುರ್ತಾಗಿ ವಿಶೇಷ ಅಧಿವೇಶನ ಕರೆದಿರುವುದು ಸಂವಿಧಾನ ವಿರೋಧಿ ನಡೆ ಎಂದು ಕೇಂದ್ರ ಧೋರಣೆ ವಿರುದ್ಧ ಖರ್ಗೆ ಕಿಡಿಕಾರಿದರು.ಚುನಾವಣಾ ಆಯೋಗದಂತೆಯೇ ಕ್ಷೇತ್ರ ಪುನರ್‌ವಿಂಗಡಣೆ ಆಯೋಗವನ್ನೂ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ಈ ಮಸೂದೆಗೆ ಮೋದಿ ಕೈ ಹಾಕಿದ್ದಾರೆ. 543ರಿಂದ 850ಕ್ಕೆ ಸಂಸತ್ ಸ್ಥಾನ ಹೆಚ್ಚಿಸುವ ಉದ್ದೇಶವೇನು? ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಹೊಡೆತ ಬೀಳೋದು ನಿಶ್ಚಿತ ಎಂದರು.ಉತ್ತರ ಭಾರತದಲ್ಲಿ ಮೊದಲಿನಿಂದಲೂ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಪ್ರಸ್ತುತ 543 ಲೋಕಸಭಾ ಸ್ಥಾನಗಳಿರುವಾಗಲೇ ಜನರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುತ್ತಿಲ್ಲ. ಅದನ್ನು 800 ಅಥವಾ 900ಕ್ಕೆ ಹೆಚ್ಚಿಸಿದರೆ ಏನು ಸಾಧನೆಯಾಗಲಿದೆ? ಇದರಿಂದ ಜನರಿಗೆ ಏನು ಪ್ರಯೋಜನವಾಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು. ಕ್ಷೇತ್ರಗಳ ಗಡಿ ನಿರ್ಧಾರದಲ್ಲಿ ಸರ್ಕಾರದ ಪ್ರಭಾವಕ್ಕೆ ಅವಕಾಶ ಇರಬಾರದು. ಭೌಗೋಳಿಕ ಸ್ಥಿತಿ, ಆಡಳಿತಾತ್ಮಕ ಅನುಕೂಲ ಹಾಗೂ ಸಾಮಾಜಿಕ ನ್ಯಾಯದ ಅಂಶಗಳನ್ನು ಪರಿಗಣಿಸಬೇಕು. ಡಿಲಿಮಿಟೇಶನ್ ಆಯೋಗದ ರಚನೆ, ಸದಸ್ಯರಿಗೆ ನೀಡಿರುವ ಅಧಿಕಾರ ಹಾಗೂ ಮತದಾನದ ಹಕ್ಕುಗಳ ಕುರಿತು ಸ್ಪಷ್ಟತೆ ಇರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ಆಯೋಗದಲ್ಲಿ ಮತದಾನದ ಹಕ್ಕು ನೀಡುವ ಪ್ರಸ್ತಾಪದ ಬಗ್ಗೆಯೂ ಪ್ರಶ್ನೆಗಳಿವೆ. ಚುನಾವಣಾ ಆಯೋಗದ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿಯೇ ಬದಲಾವಣೆ ಮಾಡಿರುವ ಸಂದರ್ಭದಲ್ಲಿ, ಅದೇ ಸಂಸ್ಥೆಯ ಮುಖ್ಯಸ್ಥರಿಗೆ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ನಿರ್ಣಾಯಕ ಪಾತ್ರ ನೀಡುವುದು ಎಷ್ಟು ಸೂಕ್ತ ಎಂದು ಖರ್ಗೆ ಪ್ರಶ್ನಿಸಿದರು.ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ವಿವಾದಗಳು ಉಂಟಾಗಿವೆ. ಆಳಂದ ಮತ್ತು ಚಿತ್ತಾಪುರ ಕ್ಷೇತ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿವೆ. ಆಳಂದನಲ್ಲಿ ನಡೆದ ಮತಗಳ ಅಳಿಸುವಿಕೆ ಪ್ರಕರಣದ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಬೇಕು. ಅರಾಜಕತೆ ಸೃಷ್ಟಿಸಿ ಅಧಿಕಾರಕ್ಕೆ ಬರುತ್ತಾರೆ, ತಮ್ಮದೇ ಪಕ್ಷದ ಶಾಸಕರ ವ್ಯಾಪ್ತಿಯಲ್ಲಿ ನಡೆದಿರುವ ವೋಟ್ ಚೋರಿ ಬಗ್ಗೆ ಸಂಬಂಧಿಸಿದ ಗಂಭೀರ ಆರೋಪಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮದ ವಿರುದ್ಧ ಎಲ್ಲ ರಾಜ್ಯಗಳು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಒಟ್ಟಾಗಿ ನಿಲ್ಲುವ ಅಗತ್ಯವಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯಪಟ್ಟರು.