ಗಡಿಯಲ್ಲಿ ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಡೀಸಿ

| Published : Mar 12 2024, 02:04 AM IST

ಸಾರಾಂಶ

ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನೆರೆಯ ಆಂಧ್ರ ರಾಜ್ಯದ ಗಡಿ ಭಾಗದಿಂದ ಜಿಲ್ಲೆಯೊಳಗೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ಕಡಿವಾಣ ಹಾಕಲು ಸಹಕಾರ ನೀಡುವಂತೆ ನೆರೆಯ ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.

ಚಿತ್ರದುರ್ಗ: ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನೆರೆಯ ಆಂಧ್ರ ರಾಜ್ಯದ ಗಡಿ ಭಾಗದಿಂದ ಜಿಲ್ಲೆಯೊಳಗೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ಕಡಿವಾಣ ಹಾಕಲು ಸಹಕಾರ ನೀಡುವಂತೆ ನೆರೆಯ ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಕೈಗೊಳ್ಳಬೇಕಿರುವ ಪ್ರಾಥಮಿಕ ಹಂತದ ಮುಂಜಾಗ್ರತಾ ಕ್ರಮಗಳ ಕುರಿತು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಶೀಘ್ರದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದ್ದು, ಈ ಸಂದರ್ಭದಲ್ಲಿ ಚುನಾವಣೆ ಸಂಬಂಧ ಜರುಗಬಹುದಾದ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ ಸ್ಥಾಪಿಸಲಾಗುವುದು.

ಆಂಧ್ರಪ್ರದೇಶದ ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ವ್ಯಾಪ್ತಿಯಲ್ಲಿ ಗಡಿ ಪ್ರದೇಶ ಹಂಚಿಕೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ನೆರೆಯ ರಾಜ್ಯದಿಂದ ಜಿಲ್ಲೆಯೆಡೆಗೆ ಅಕ್ರಮ ಮದ್ಯ, ವಿವಿಧ ಬಗೆಯ ಸಾಮಗ್ರಿ ಸಾಗಾಣಿಕೆ ಮಾಡುವುದು, ಅಪರಿಚಿತ ವ್ಯಕ್ತಿಗಳು ಜಿಲ್ಲೆಯೊಳಗೆ ಆಗಮಿಸಿ, ಚುನಾವಣೆ ಮೇಲೆ ಪ್ರಭಾವ ಬೀರುವಂತಹ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಆಂಧ್ರದ ಗಡಿಯಲ್ಲಿ ಬರುವ ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಗೇಟ್‌, ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಹಾಗೂ ಪಿ.ಡಿ.ಕೋಟೆ ಕ್ರಾಸ್‌ಗಳಲ್ಲಿ ಚೆಕ್‍ಪೋಸ್ಟ್‌ ಸ್ಥಾಪಿಸಿ, ತೀವ್ರ ನಿಗಾವಹಿಸಲಾಗುವುದು. ಅದೇ ರೀತಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ವ್ಯಾಪ್ತಿಯಲ್ಲಿಯೂ ಅಧಿಕಾರಿಗಳು ಸೂಕ್ತ ಪ್ರದೇಶದಲ್ಲಿ ಚೆಕ್‍ಪೋಸ್ಟ್‌ ನಿರ್ಮಿಸಿ, ಅಕ್ರಮವಾಗಿ ಅಲ್ಲಿಂದ ಮದ್ಯ ಸಾಗಾಣಿಕೆಯಾಗದಂತೆ ಹಾಗೂ ಮತದಾರರಿಗೆ ಹಂಚಿಕೆ ಮಾಡುವ ಸಲುವಾಗಿ ವಿವಿಧ ಸಾಮಗ್ರಿಗಳನ್ನು ಸಾಗಿಸದಂತೆ ನಿಗಾವಹಿಸಬೇಕು ಎಂದರು.

ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಮಾಡಲು, ನಿಗಾವಹಿಸಲು ಅಲ್ಲಿನ ಅಧಿಕಾರಿಗಳು ಕ್ರಮವಹಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ನೆರೆ ರಾಜ್ಯದ ಅಧಿಕಾರಿಗಳು ಇಲ್ಲಿನ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್.ಟಿ ಕೋರಿದರು.

ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ಅಬಕಾರಿ ಉಪ ಆಯುಕ್ತ ಮಾದೇಶ್, ಉಪವಿಭಾಗಾಧಿಕಾರಿ ಕಾರ್ತಿಕ್, ಸೇರಿದಂತೆ ವಿವಿಧ ಅಧಿಕಾರಿಗಳು. ಸತ್ಯಸಾಯಿ ಜಿಲ್ಲೆ ಕಲೆಕ್ಟರ್ ಪಿ. ಅರುಣ್ ಬಾಬು, ಪೊಲೀಸ್ ಅಧೀಕ್ಷಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಇತರೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.