ಪ್ರಾಣ ಬಿಟ್ಟ ಸಹವರ್ತಿಯ ಬಿಡದ ಗಜ ಪಡೆ: ಮೃತ ದೇಹ ಸುತ್ತುವರೆದ ಆನೆಗಳು

| Published : Nov 10 2024, 01:30 AM IST / Updated: Nov 10 2024, 01:31 AM IST

ಪ್ರಾಣ ಬಿಟ್ಟ ಸಹವರ್ತಿಯ ಬಿಡದ ಗಜ ಪಡೆ: ಮೃತ ದೇಹ ಸುತ್ತುವರೆದ ಆನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹಲವು ವರ್ಷಗಳಿಂದ ತಮ್ಮ ಬೆನ್ನಿಗೆ ನಿಂತು, ತನ್ನೊಂದಿಗೆ ನೂರಾರು ಕಿಲೋ ಮೀಟರ್‌ ಜತೆಯಲ್ಲಿಯೇ ಸಾಗಿದ ಸ್ನೇಹಿತನನ್ನು ಕಳೆದುಕೊಂಡಿರುವ ಗಜ ಪಡೆ, ಕೊನೆ ಕ್ಷಣದವರೆಗೂ ಆತನಿಗೆ ಕಾವಲಾಗಿ ನಿಂತಿರುವ ಕರುಣಾಜನಕ ಘಟನೆ ಶನಿವಾರ ನಡೆದಿದೆ.

ಎಲ್ಲಿಂದಲೋ ಬಂದು ಪ್ರಾಣ ಕಳೆದುಕೊಂಡಿತು । ಮರಣೋತ್ತರ ಪರೀಕ್ಷೆಗೆ ಅಡ್ಡಿ

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಲವು ವರ್ಷಗಳಿಂದ ತಮ್ಮ ಬೆನ್ನಿಗೆ ನಿಂತು, ತನ್ನೊಂದಿಗೆ ನೂರಾರು ಕಿಲೋ ಮೀಟರ್‌ ಜತೆಯಲ್ಲಿಯೇ ಸಾಗಿದ ಸ್ನೇಹಿತನನ್ನು ಕಳೆದುಕೊಂಡಿರುವ ಗಜ ಪಡೆ, ಕೊನೆ ಕ್ಷಣದವರೆಗೂ ಆತನಿಗೆ ಕಾವಲಾಗಿ ನಿಂತಿರುವ ಕರುಣಾಜನಕ ಘಟನೆ ಶನಿವಾರ ನಡೆದಿದೆ.

ಸಕಲೇಶಪುರದಲ್ಲಿದ್ದ ಭುವನೇಶ್ವರಿ, ಬೀಟಮ್ಮ- 1, ಬೀಟಮ್ಮ- 2 ಟೀಮ್‌ನಲ್ಲಿ ಸುಮಾರು 60 ಆನೆಗಳಿದ್ದವು. ಅದ್ಯಾವ ಕಾರಣಕ್ಕೋ ಏನೋ ಆ ಗುಂಪಿನಲ್ಲಿದ್ದ ಸುಮಾರು 20 ಆನೆಗಳು ಮರಿ ಸಹಿತ ಬೇರ್ಪಟ್ಟು ಚಿಕ್ಕಮಗಳೂರು ಜಿಲ್ಲೆಯತ್ತಾ ಪ್ರಯಾಣ ಬೆಳೆಸಿವೆ. ಗುಂಪಿನಲ್ಲಿರುವ ಆನೆಗಳು ಪ್ರತ್ಯೇಕವಾಗುವುದು ತುಂಬಾ ಅಪರೂಪ. ಅದರಲ್ಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ಆಶ್ಚರ್ಯವಾಗಿದೆ.

ಹಾಗಾದರೆ ಆ ಭಾಗದಲ್ಲಿ ಆಹಾರ, ನೀರಿನ ಕೊರತೆ ಇದೀಯಾ, ಖಂಡಿತವಾಗಿಯೂ ಇಲ್ಲ. ಈ ಬಾರಿ ನೆರೆಯ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಆನೆಗಳಿಗೆ ಬೇಕಾಗಿರುವ ಆಹಾರದ ಲಭ್ಯತೆ ಅಗತ್ಯಕ್ಕಿಂತ ಹೆಚ್ಚಾಗಿದೆ. ಆದರೂ ಸಕಲೇಶಪುರ ತಾಲೂಕಿನಿಂದ ಚಿಕ್ಕಮಗಳೂರುವೀ ಆನೆಗಳು ಜಿಲ್ಲೆಗೆ ಬಂದಿವೆ. ಅವುಗಳು ಬಂದು 6 ದಿನಗಳು ಕಳೆದಿದೆ.

ಮೊದಲ 4 ದಿನ ಈ ಆನೆಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಿರಲಿಲ್ಲ. ಆದರೆ, ಗುರುವಾರ ರಾತ್ರಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ವೇಳೆಯಲ್ಲಿ ಇಲ್ಲಿನ ತುಡುಕೂರು ಗ್ರಾಮದ ಬಳಿ ಬತ್ತದ ಬೆಳೆ, ಕಾಫಿ, ತೋಟಗಳಿಗೆ ನೀರು ಹಾಯಿಸುವ ಪೈಪ್‌ಗಳಿಗೆ ಹಾನಿಯಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಆನೆಗಳ ಹಿಂಡಿಗೆ ವಿದ್ಯುತ್‌ ಶಾಕ್‌ ನೀಡಿದೆ.ಬಿಟ್ಟು ಹೋಗದ ಸ್ನೇಹಿತರು:

ಆಲ್ದೂರಿನ ಪುರ ಬಳಿ ಶನಿವಾರ ಬೆಳಿಗ್ಗೆ ಎಲ್ಲವೂ ಒಟ್ಟಿಗೆ ಸಾಗುವ ವೇಳೆಯಲ್ಲಿ ಮಧ್ಯಾಹ್ನ ಸಮಯದಲ್ಲಿ ಗುಂಪಿನಲ್ಲಿದ್ದ ಸುಮಾರು 30 ವರ್ಷದ ಗಂಡಾನೆ ವಿದ್ಯುತ್‌ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.

ಆ ಸಂದರ್ಭದಲ್ಲಿ ಎಲ್ಲಾ ಆನೆಗಳು ಸ್ಥಳದಿಂದ ತೆರಳಿವೆ. ಅವುಗಳಿಗೆ ಅದೇನು ಎನಿಸಿತೋ ಸಂಜೆ 4 ಗಂಟೆ ವೇಳೆಗೆ ಅವಘಡ ನಡೆದ ಸ್ಥಳಕ್ಕೆ ವಾಪಸ್‌ ಬಂದು ಮೃತಪಟ್ಟ ಆನೆ ಸುತ್ತಲೂ ಓಡಾಡುತ್ತಾ ಚಡಪಡಿಸುತ್ತಿದ್ದವು. ಬೆನ್ನು ಬಿಡದೆ ಜತೆ ಜತೆಯಲ್ಲಿಯೇ ಬಂದು ಪ್ರಾಣ ಬಿಟ್ಟಿರುವ ಸ್ನೇಹಿತನನ್ನು ನೋಡಿ ಮೂಖ ರೋಧನೆ ವ್ಯಕ್ತಪಡಿಸುತ್ತಿದ್ದವು. ಒಬ್ಬರನ್ನೇ ಇಲ್ಲಿಯೇ ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆಯೊಂದಿಗೆ ಸುರ್ಯಾಸ್ತದವರೆಗೆ ಸ್ಥಳದಲ್ಲಿಯೇ ನಿಂತಿದ್ದವು.

ಮೃತಪಟ್ಟ ಆನೆ ಮರಣೋತ್ತರ ಪರೀಕ್ಷೆಗೆ ಹೋಗಿದ್ದ ಪಶು ವೈದ್ಯರು, ಅರಣ್ಯ ಸಿಬ್ಬಂದಿ ಮನ ಕಲಕುವ ಈ ದೃಶ್ಯವನ್ನು ಕಂಡು ಛೇ ಹೀಗೆ ಆಗಬಾರದಿತ್ತು ಎಂದು ತಮ್ಮ ಸಹ ವರ್ತಿಗಳೊಂದಿಗೆ ಮಾತನಾಡುತ್ತಿದ್ದರು. ಆನೆ ಮರಣೋತ್ತರ ಪರೀಕ್ಷೆಗೆ ಕನಿಷ್ಠ 3 ಗಂಟೆ ಸಮಯ ಬೇಕಾಗುತ್ತದೆ. ಮೃತ ಆನೆ ಸುತ್ತ ಮುತ್ತ ಆನೆಗಳು ನಿಂತಿದ್ದರಿಂದ ಶನಿವಾರ ಮರಣೋತ್ತರ ಪರೀಕ್ಷೆ ಆಗಲಿಲ್ಲ. ಈ ಪ್ರಕ್ರಿಯೆಯನ್ನು ಭಾನುವಾರಕ್ಕೆ ಮುಂದೂಡಲಾಯಿತು.