ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮೃತ ನವಜಾತ ಶಿಶು ಪತ್ತೆ

| Published : Jun 08 2024, 12:34 AM IST

ಸಾರಾಂಶ

ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾದ ಮೃತ ನವಜಾತ ಹೆಣ್ಣು ಶಿಶು

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮೃತ ನವಜಾತ ಶಿಶು ಪತ್ತೆಯಾದ ಘಟನೆ ನಡೆದಿದೆ.

ಆಸ್ಪತ್ರೆಯ ಶವಾಗಾರಕ್ಕೆ ಹೋಗುವ ದಾರಿಯಲ್ಲಿರುವ ಶೌಚಾಲಯದ ಬಳಿ ಮಗುವಿನ ಮೃತ ದೇಹ ಪತ್ತೆಯಾಗಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ದುರುಳರು ಬಿಸಾಡಿ ಹೋದರಾ ಎಂಬ ಶಂಕೆ ಮೂಡಿದೆ.

ಒಂದು ದಿನದ ಹಿಂದೆ ಜನಿಸಿರುವ ಹೆಣ್ಣು ಮಗು ಎನ್ನಲಾಗಿದ್ದು, ಶೋಚಾಲಯದತ್ತ ಹೋದ ಸಾರ್ವಜನಿಕರು ಮಗು ನೋಡಿ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ವೈದ್ಯಾಧಿಕಾರಿ ಡಾ.ಕುಮಾರ್ ನಾಯ್ಕ ಪ್ರತಿಕ್ರಿಯಿಸಿ, ಮೃತ ನವಜಾತ ಹೆಣ್ಣು ಶಿಶು ಆಸ್ಪತ್ರೆ ಆವರಣದಲ್ಲಿ ಪತ್ತೆಯಾಗಿದ್ದು, ತನಿಖೆಯ ನಂತರ ಪ್ರಕರಣದ ಹಿನ್ನೆಲೆ ತಿಳಿಯಲಿದೆ. ಆಸ್ಪತ್ರೆಯ ಜನರಲ್ ವಾರ್ಡ್ ನ ಶೌಚಾಲಯದ ಕಿಟಕಿ ಮೂಲಕ ಮಗುವನ್ನು ಎಸೆದಿದ್ದು ಸಿಸಿ ಟಿವಿಯಲ್ಲಿ ಗೋಚರಿಸಿದೆ ಆದರೆ ಅದು ಸ್ಪಷ್ಟವಾಗಿ ಕಾಣುತ್ತಿಲ್ಲ. ಪೋಲೀಸ್‌ ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ಶೌಚಾಲಯದಲ್ಲಿ ಸ್ವಚ್ಛತೆ ಮರಿಚಿಕೆ

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಶೌಚಾಲಯದಲ್ಲಿ ದುರ್ವಾಸನೆ ತುಂಬಿದೆ. ಈ ಹಿಂದೆ ಸಾರ್ವಜನಿಕರ ಬಳಕೆಗೆಂದು 2017-18 ರಲ್ಲಿ ₹20ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ಗಿರೀಶ್ ರವರು 2022ರ ಜು. ತಿಂಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲು ಆದ್ದೇಶಿಸಿದ್ದರು. ನಿರ್ಮಾಣವಾಗಿ 3-4 ವರ್ಷಗಳ ನಂತರ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಸ್ವಚ್ಛತೆ ಮರೀಚಿಕೆಯಾಗಿ ಆಸ್ಪತ್ರೆಗೆ ಬರುವ ಸಾರ್ವಜನಿಕರು ಆವರಣದ ಗೋಡೆಗಳನ್ನು ಮೂತ್ರ ವಿಸರ್ಜನೆಗೆ ಬಳಸುತ್ತಿದ್ದಾರೆ.