ಕಾಡಿನಿಂದ ನಾಡಿಗೆ ಬಂದ ಜಿಂಕೆ!

| Published : Apr 29 2024, 01:36 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ಕೊಂಬುಳ್ಳ 7 ವಯಸ್ಸಿನ ಗಂಡು ಚುಕ್ಕಿ ಜಿಂಕೆಯೊಂದು ಕಾಡಿನಿಂದ ದಾರಿತಪ್ಪಿಮನೆಯೊಳಗೆ ನುಗ್ಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಚನ್ನಪಟ್ಟಣ: ತಾಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ಕೊಂಬುಳ್ಳ 7 ವಯಸ್ಸಿನ ಗಂಡು ಚುಕ್ಕಿ ಜಿಂಕೆಯೊಂದು ಕಾಡಿನಿಂದ ದಾರಿತಪ್ಪಿಮನೆಯೊಳಗೆ ನುಗ್ಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಕಾಡಂಚಿನ ಚನ್ನಪ್ಪಾಜಿ ಬೆಟ್ಟದ ಕಡೆಯಿಂದ ದಾರಿ ತಪ್ಪಿ ಗ್ರಾಮಕ್ಕೆ ಬಂದ ಜಿಂಕೆಯನ್ನು ಗ್ರಾಮದ ನಾಯಿಗಳು ಓಡಿಸಿಕೊಂಡು ಬಂದಾಗ ಜಿಂಕೆ ಹೆದರಿ ವಸಂತಮ್ಮ ಮನೆಗೆ ನುಗ್ಗಿದ್ದು ಭಯದಲ್ಲಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದೆ. ಜಿಂಕೆ ಮನೆಗೆ ನುಗ್ಗಿದ್ದು ಕಂಡು ಮನೆಯವರು ಗಾಬರಿಗೊಂಡಿದ್ದಾರೆ.

ಇದನ್ನು ಕಂಡ ಗ್ರಾಮದ ಮುಖಂಡರಾದ ಎಂ.ರಾಮಕೃಷ್ಣ, ಎಂ.ಪುಟ್ಟೇಗೌಡ, ಎಚ್.ಎಸ್.ಸಿದ್ದರಾಜು ಇತರರು ನಾಯಿಗಳನ್ನು ಓಡಿಸಿ ಜಿಂಕೆ ರಕ್ಷಣೆ ಮಾಡಿದರು. ಜಿಂಕೆಗೆ ತೊಂದರೆಯಾಗದಂತೆ ಅದನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿದರು. ನಂತರ ಅದಕ್ಕೆ ನೀರು ಕುಡಿಸಿ, ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಾತನೂರು ವಿಭಾಗದ ಸಿಬ್ಬಂದಿಗಳಾದ ಕಾಂತರಾಜು, ರಿಜ್ವಾನ್ ಜಿಂಕೆಯನ್ನು ವಶಕ್ಕೆ ಪಡೆದುಕೊಂಡರು. ಕುಡಿಯುವ ನೀರು ಅರಸಿಕೊಂಡು ಈ ಜಿಂಕೆ ಕಾಡಿನಿಂದ ನಾಡಿಗೆ ಬಂದಿದೆ. ಇದಕ್ಕೆ ಆರೋಗ್ಯ ತಪಾಸಣೆ ನಡೆಸಿ ಆನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಪೊಟೋ೨೮ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ಬಂದ ಚುಕ್ಕಿ ಜಿಂಕೆ.