ಪದವಿ ಅಂದರೆ ಸರ್ಟಿಫಿಕೇಟ್ ಅಲ್ಲ, ಅದು ಸ್ಥಾನಮಾನದ ಸಾಧನೆ: ಡಾ.ಪ್ರವೀಣ್ ಶೆಟ್ಟಿ

| Published : Jul 21 2024, 01:29 AM IST

ಸಾರಾಂಶ

ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭ ಡಾಕ್ಟರೇಟ್ ಪದವಿ ಪಡೆದ ಸಂಸ್ಕೃತ ವಿಭಾಗದ ಪ್ರಾಧ್ಯಾಪಿಕೆ ಶ್ರೀಮತಿ ಹಾಗೂ ಚೆನ್ನೈ ಮ್ಯಾಥಮ್ಯಾಟಿಕಲ್ ಆನರ್ಸ್‌ ಪದವಿ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿ ಪ್ರಣತ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪದವಿ ಅಂದರೆ ಸರ್ಟಿಫಿಕೇಟ್ ಗಳಿಸುವುದು ಅಲ್ಲ. ಪದವಿ ಅಂದರೆ ಸ್ಥಾನಮಾನ ಪಡೆಯುವುದು, ಇದು ಜ್ಞಾನದಿಂದ ಸಾಧಿತವಾಗುತ್ತದೆ. ಅಂಕ ಗಳಿಸುವುದೇ ಜೀವನವಲ್ಲ. ಒಂದು ರಂಗದಲ್ಲಿ ಸೋಲನ್ನು ಕಂಡರೆ ಇನ್ನೊಂದು ರಂಗದಲ್ಲಿ ಯಶಸ್ವಿಯಾಗಬಹುದು. ಸೋತ ಮಾತ್ರಕ್ಕೆ ಮಾನಸಿಕ ಧೈರ್ಯವನ್ನು ಕಳೆದುಕೊಳ್ಳಬಾರದು ಎಂದು ಮಾಹೆಯ ಸೆಂಟರ್ ಫಾರ್ ಇಂಟರ್ ಕಲ್ಚರಲ್ ಸ್ಟಡೀಸ್ ಆ್ಯಂಡ್ ಡೈಲಾಗ್‌ನ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ್ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ಇನ್ನೊಬ್ಬರ ಕುರಿತು ವ್ಯಂಗ್ಯ, ಗಾಸಿಪ್ ಮಾಡಬಾರದು. ಬದುಕಿನಲ್ಲಿ ಚೆಲ್ಲಾಟ ಆಡಿದರೆ, ಬದುಕು ಕಳೆದುಕೊಳ್ಳಬಹುದು. ಉತ್ತೇಜನ ನೀಡುವುದು ಮುಖ್ಯ. ನಿರಂತರ ಕಲಿಕೆಯಿಂದ ಸಾಧನೆ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಿ ಎಲ್ಲರಿಗೂ ಮಾದರಿಯಾಗಲಿ. ಮುಖಂಡತ್ವ ಗುಣವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಸಂಸ್ಕೃತ ವಿಭಾಗದ ಪ್ರಾಧ್ಯಾಪಿಕೆ ಶ್ರೀಮತಿ ಹಾಗೂ ಚೆನ್ನೈ ಮ್ಯಾಥಮ್ಯಾಟಿಕಲ್ ಆನರ್ಸ್‌ ಪದವಿ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿ ಪ್ರಣತ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯೆ ಪ್ರತಿಮಾ ಬಾಳಿಗಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ವೀಣಾ ಪ್ರಭು ಸನ್ಮಾನಿತರ ಸಾಧನೆಯನ್ನು ಪರಿಚಯಿಸಿದರು. ವಿದ್ಯಾರ್ಥಿ ಅನೀಶ್ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆಮ್ತೂರ್ ಮನೋಜ್ ಕೃಷ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.