ಸಂಸ್ಕಾರ ಪಡೆದ ವ್ಯಕ್ತಿ ದೇಶದ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಬಹುದೊಡ್ಡ ಕೊಡುಗೆ ನೀಡಬಲ್ಲ ಎಂಬ ವಿಶ್ವಾಸ ಜನ ಸಮುದಾಯದ ನಡುವೆ ಗಟ್ಟಿಯಾಗಿ ಬೇರೂರಿದೆ ಎಂದು ಆಧ್ಯಾತ್ಮಿಕ ಚಿಂತಕ ಮಸೀದಿಪುರ ಎಂ. ಚಂದ್ರಶೇಖರಗೌಡ ತಿಳಿಸಿದರು.

ಬಳ್ಳಾರಿ: ಭಾರತೀಯ ಪರಂಪರೆಯಲ್ಲಿ ಕಂಡು ಬರುವ ವಿವಿಧ ಆಚರಣೆ ಹಾಗೂ ಪದ್ಧತಿಗಳಿಗೆ ತನ್ನದೇ ಆದ ಮಹತ್ವವಿದೆ. ಸಂಸ್ಕಾರ ಪಡೆದ ವ್ಯಕ್ತಿ ದೇಶದ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಬಹುದೊಡ್ಡ ಕೊಡುಗೆ ನೀಡಬಲ್ಲ ಎಂಬ ವಿಶ್ವಾಸ ಜನ ಸಮುದಾಯದ ನಡುವೆ ಗಟ್ಟಿಯಾಗಿ ಬೇರೂರಿದೆ ಎಂದು ಆಧ್ಯಾತ್ಮಿಕ ಚಿಂತಕ ಮಸೀದಿಪುರ ಎಂ. ಚಂದ್ರಶೇಖರಗೌಡ (ಎಂಸಿಜಿ) ತಿಳಿಸಿದರು.

ಶ್ರೀಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಹಾಗೂ ಸಂಸ್ಕಾರ ಭಾರತಿ ಸಹಯೋಗದಲ್ಲಿ ಇಲ್ಲಿನ ಬ್ಯಾಂಕ್ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಭಾರತ ಮಾತಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ಹೊರತುಪಡಿಸಿದರೆ ಜಗತ್ತಿನ ಯಾವುದೇ ದೇಶದಲ್ಲಿ ಮಣ್ಣನ್ನು ಪೂಜಿಸುವ ಸಂಸ್ಕಾರವಿಲ್ಲ. ನಮ್ಮ ಪೂರ್ವಿಕರು ಅಂತಹ ಸಂಸ್ಕಾರ ಹೇಳಿಕೊಟ್ಟಿದ್ದಾರೆ. ಒಂದು ದೇಶವನ್ನು ಮಾತೆ ಎಂದು ಕರೆಯುವ ಕಲ್ಪನೆಯೇ ಮೈ ರೋಮಾಂಚನಗೊಳ್ಳುವಂಥಹದ್ದು. ಎಲ್ಲವೂ ನನ್ನದು. ದೇಶದ ಸಮಸ್ತ ಜನರು ನಮ್ಮವರು ಎಂಬ ಭಾವ ಮೂಡುವುದರಿಂದ ಮಾತ್ರ ವಿಕಸಿತ ಭಾರತ ನಿರ್ಮಿಸಲು ಸಾಧ್ಯ. ಯುವ ಸಮುದಾಯ ನಿದ್ರಾವಸ್ಥೆಯಿಂದ ಹೊರ ಬಂದು ಜಾಗೃತರಾಗಬೇಕು. ಭವ್ಯ ಭಾರತೀಯ ಪರಂಪರೆಯನ್ನು ಜತನದಿಂದ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಅತ್ಯಂತ ಪ್ರೀತಿಯಿಂದಲೇ ಸ್ವೀಕರಿಸುವಂತಾಗಬೇಕು. ವಿದ್ಯೆ ಎಂಬುದು ಹೊಟ್ಟೆಪಾಡಿಗಾಗಿ ಉದ್ಯೋಗ ಹುಡುಕಿಕೊಳ್ಳಲಷ್ಟೇ ಸೀಮಿತಗೊಳ್ಳಬಾರದು. ಸಂಸ್ಕಾರವಂತ ಬದುಕು ರೂಪಿಸಿಕೊಳ್ಳುವುದು ವಿದ್ಯೆ ಕಲಿಕೆಯ ಮುಖ್ಯ ಉದ್ದೇಶವಾಗಬೇಕು ಎಂದು ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭದ್ರಗೌಡ ಮಾತನಾಡಿದರು. ಸಂಸ್ಕಾರ ಭಾರತಿ ಸಂಸ್ಥೆಯ ಗುರುರಾಜ್ ಸಸಿಹಿತ್ಲು, ಅಮರೇಶ ಎಚ್.ಎಂ. ಹಾಗೂ ಶ್ರೀಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಸುಬ್ಬಣ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಸಂಸ್ಕಾರ ಭಾರತಿ ಸಂಸ್ಥೆಯ ಅಧ್ಯಕ್ಷ ಹಾಗೂ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು ಅವರು ಕಾರ್ಯಕ್ರಮ ನಿರ್ವಹಿಸಿದರು. ಹುಲುಗಪ್ಪ ಹಾಗೂ ತಂಡದಿಂದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು. ಕೊನೆಯಲ್ಲಿ ಹಂದಿಹಾಳು ಶ್ರೀ ಮಹಾದೇವತಾತ ಕಲಾ ಸಂಘದಿಂದ ದನ ಕಾಯೋರ ದೊಡ್ಡಾಟ ಹಾಸ್ಯ ನಾಟಕ ಪ್ರದರ್ಶನಗೊಂಡಿತು.