ವಾಯವ್ಯ ಸಾರಿಗೆ ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರ (51) ನವೆಂಬರ್ 11 ರಂದು ಧಾರವಾಡದಲ್ಲಿ ಮೃತಪಟ್ಟಿದ್ದರು. ಅಂದು ಕುಟುಂಬಸ್ಥರು ಇದು ಹೃದಯಾಘಾತ ಎಂದು ಭಾವಿಸಿ ಸ್ವಗ್ರಾಮವಾದ ಭದ್ರಾಪುರದಲ್ಲಿ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಅಣ್ಣಿಗೇರಿ:
ಕಳೆದ ನವೆಂಬರ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಿ ಅಂತ್ಯಸಂಸ್ಕಾರ ಮಾಡಿದ್ದ ವ್ಯಕ್ತಿಯ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಪೋಷಕರ ದೂರಿನ ಮೇರೆಗೆ ತಾಲೂಕಿನ ಭದ್ರಾಪುರದಲ್ಲಿ ಹೂತಿದ್ದ ಶವವನ್ನು ಬುಧವಾರ ತಹಸೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಘಟನೆಯ ಹಿನ್ನೆಲೆ:
ವಾಯವ್ಯ ಸಾರಿಗೆ ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರ (51) ನವೆಂಬರ್ 11 ರಂದು ಧಾರವಾಡದಲ್ಲಿ ಮೃತಪಟ್ಟಿದ್ದರು. ಅಂದು ಕುಟುಂಬಸ್ಥರು ಇದು ಹೃದಯಾಘಾತ ಎಂದು ಭಾವಿಸಿ ಸ್ವಗ್ರಾಮವಾದ ಭದ್ರಾಪುರದಲ್ಲಿ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.ಕೆಲ ದಿನ ಕಳೆದ ಬಳಿಕ ಬಾಬಾಜಾನ್ ಅವರ ಪತ್ನಿ ವಹಿದಾಬಿ ನಡವಳಿಕೆಯ ಮೇಲೆ ಪೋಷಕರಿಗೆ ಅನುಮಾನ ಬಂದಿದೆ. ತನ್ನ ಮಗನದ್ದು ಸಹಜ ಸಾವಲ್ಲ, ಯಾವುದೋ ದುರುದ್ದೇಶದಿಂದ ಸೊಸೆಯೇ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಬುಧವಾರ ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ಶವವನ್ನು ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಅಣ್ಣಿಗೇರಿ ಠಾಣೆ ಪಿಎಸ್‌ಐ ಉಮಾದೇವಿ ಸಮ್ಮುಖದಲ್ಲಿ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆ ಸಿಬ್ಬಂದಿಗಳು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಿದರು. ಈಗ ಈ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಇದು ಕೊಲೆಯೋ ಅಥವಾ ನೈಸರ್ಗಿಕ ಸಾವೋ ಎಂಬ ಸತ್ಯ ಹೊರಬರಲಿದೆ.