102 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿಯ 575 ಮೆಟ್ಟಿಲೇರಿದ ಭಕ್ತ

| Published : Jul 23 2025, 01:45 AM IST

ಸಾರಾಂಶ

102 ಕೆಜಿಯ ಜೋಳದ ಚೀಲ ಹೊತ್ತ 62 ವರ್ಷದ ಭಕ್ತರೊಬ್ಬರು 62 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ನಿಂಗಪ್ಪ ಸವಣೂರು (62) ಸಾಧನೆ ಮಾಡಿದ್ದಾರೆ.

ಗಂಗಾವತಿ:

102 ಕೆಜಿಯ ಜೋಳದ ಚೀಲ ಹೊತ್ತ 62 ವರ್ಷದ ಭಕ್ತರೊಬ್ಬರು 62 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ನಿಂಗಪ್ಪ ಸವಣೂರು (62) ಇಂತಹ ಸಾಧನೆ ಮಾಡಿದ್ದಾರೆ.

ಬಹುದಿನದಿಂದ ಅವರು ಜೋಳದ ಚೀಲ ಹೊತ್ತುಕೊಂಡು ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆಯಬೇಕೆಂದು ಬೇಡಿಕೊಂಡಿದ್ದರು. ಅದರಂತೆ

ಮಂಗಳವಾರ ಬೆಳಗ್ಗೆ 102 ಕೆಜಿ ಜೋಳದ ಚೀಲ ಹೊತ್ತ ನಿಂಗಪ್ಪ, ಸರಸರನೇ ಮೆಟ್ಟಿಲು ಏರಲು ಆರಂಭಿಸಿದರು. ಸುತ್ತಲಿನ ಭಕ್ತರು ಅವರ ಸಾಧನೆ ನೋಡಿ ಹುರಿದುಂಬಿಸಿದರು. ಕೇವಲ 62 ನಿಮಿಷದಲ್ಲಿ 575 ಮೆಟ್ಟಿಲು ಏರಿದರು. ನಡುವೆ ಅಲ್ಲಿ ಸಲ್ಲಿ ಸ್ವಲ್ಪ ನೀರು ಕುಡಿದರೂ ಹೊರತು ಬೆನ್ನ ಮೇಲಿನ ಚೀಲವನ್ನು ಕೆಳಗಿಳಸಲೇ ಇಲ್ಲ. ಬೆಟ್ಟವೇರುವಾಗ ಜೈಶ್ರೀರಾಮ ಎಂದು ನಿಂಗಪ್ಪ ಘೋಷಣೆ ಕೂಗುತ್ತಿದ್ದರೆ ಸುತ್ತಲಿದ್ದ ಜನರು ಜೈ ಆಂಜನೇಯ ಜೈ ಆಂಜನೇಯ ಎಂದು ಕೂಗಿದರು.

ಇದೀಗ ಇವರು ಬೆಟ್ಟವೇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದ್ದು ಇವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.ಬಹುದಿನಗಳಿಂದ ಆಂಜನೇಯ ಸ್ವಾಮಿ ಸೇವೆ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. ಈಗ ಪ್ರೇರಣೆಯಾಗಿದ್ದದರಿಂದ 102 ಕೆಜಿ ಜೋಳ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದೇನೆ ಎಂದು ನಿಂಗಪ್ಪ ಸವಣೂರು ಹೇಳಿದರು.