ಮೈಸೂರು ದಸರಾ ನೆನಪಿಸಿದ ಧಾರವಾಡ ಜಂಬೂ ಸವಾರಿ

| Published : Oct 13 2024, 01:07 AM IST

ಸಾರಾಂಶ

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಹಮ್ಮಿಕೊಂಡ ಜಂಬೂ ಸವಾರಿ ಮೆರವಣಿಗೆ ದೃಶ್ಯಗಳಿವು. ಮೈಸೂರಲ್ಲಿ ನಡೆಯುವ ದಸರಾ ಮೆರವಣಿಗೆಯನ್ನು ಧಾರವಾಡ ಸಾರ್ವಜನಿಕರಿಗೆ ತೋರಿಸುವ ಉತ್ಸವ ಸಮಿತಿ ಪ್ರಯತ್ನ ಸಾಫಲ್ಯ ಕಂಡಿದೆ.

ಧಾರವಾಡ:

ಸಾಂಸ್ಕೃತಿಕ ವೈಭವ ಬಿಂಬಿಸುವ ವಿವಿಧ ಕಲಾತಂಡಗಳು, ಜಾನಪದ ವಾದ್ಯಗಳ ಮೇಳ ಮತ್ತು ಕುಣಿತಗಳ ಸದ್ದು, ಗಜಪಡೆ ಮೇಲೆ ದೇವಿಯ ಅಂಬಾರಿ ಮೆರವಣಿಗೆ. ಇವೆಲ್ಲವೂ ನೋಡಿದಾಕ್ಷಣ ಮೈಸೂರು ದಸರಾ ಉತ್ಸವ ನೆನಪಿಸಿತು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಹಮ್ಮಿಕೊಂಡ ಜಂಬೂ ಸವಾರಿ ಮೆರವಣಿಗೆ ದೃಶ್ಯಗಳಿವು. ಮೈಸೂರಲ್ಲಿ ನಡೆಯುವ ದಸರಾ ಮೆರವಣಿಗೆಯನ್ನು ಧಾರವಾಡ ಸಾರ್ವಜನಿಕರಿಗೆ ತೋರಿಸುವ ಉತ್ಸವ ಸಮಿತಿ ಪ್ರಯತ್ನ ಸಾಫಲ್ಯ ಕಂಡಿದೆ. ಶುಕ್ರವಾರ ದೇವಿ ಉತ್ಸವ ಮೆರವಣಿಗೆ ಗಾಂಧಿನಗರದ ಬಂಡೆಮ್ಮ ದೇವಸ್ಥಾನದಿಂದ ಪ್ರಾರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲಾಸಕ್ತರಿಗೆ, ಮಕ್ಕಳಿಗೆ ಸಾಂಸ್ಕೃತಿಕ ರಸದೌತಣ ನೀಡಿತು.ಗೊಂಬೆ ಕುಣಿತ, ಜಾಂಜ್ ಮೇಳ, ಜಗ್ಗಲಿಗೆ ಮೇಳ, ಕೌಂಸಾಳೆ, ಲಂಬಾಣಿ ಕುಣಿತ, ಜಾಗಟೆ, ಮೃದಂಗ, ಡೊಳ್ಳು ಕುಣಿತ ಸೇರಿ 10ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡು, ಸಾಂಸ್ಕೃತಿಕ-ಸಾಹಿತ್ಯಿಕ ಶಕ್ತಿ ಪ್ರದರ್ಶನ ಜನರನ್ನು ಆಕರ್ಷಿಸಿದವು.

ಪ್ರತಿ ವರ್ಷ ಧಾರವಾಡ ಜಂಬೂ ಸವಾರಿ ಸಮಿತಿ ಹಾಗೂ ಗೌಳಿಗಲ್ಲಿ ಮಾರುತಿ ದೇವಸ್ಥಾನ ವಿಶ್ವಸ್ಥ ಮಂಡಳಿ ವಿಜಯದಶಮಿ ದಿನ ಪ್ರತ್ಯೇಕ ಜಂಬೂ ಸವಾರಿ ನಡೆಸುತ್ತಿದ್ದವು. ಆದರೆ ಉಭಯ ಸಮಿತಿ ಒಗ್ಗೂಡಿ ಒಂದೇ ಸವಾರಿ ನಡೆಸಿದ್ದು ವಿಶೇಷ.

ದೇವಿ ಮೂರ್ತಿ ಕುಳ್ಳಿರಿಸಿದ ಜಂಬೂ ಸವಾರಿ ಹೊತ ಗಜಪಡೆ ಮೆರವಣಿಗೆಯು ಕಲಘಟಗಿ ರಸ್ತೆ, ಟೋಲನಾಕಾ, ಬಾಗಲಕೋಟ ಪೆಟ್ರೋಲ್ ಪಂಪ್, ಹೊಸಯಲ್ಲಾಪೂರ, ಗಾಂಧಿ ಚೌಕ್‌, ಸುಭಾಸ ರಸ್ತೆ ಮಾರ್ಗವಾಗಿ ಸಂಚರಿಸಿ ನಂತರ ಕಡಪಾ ಮೈದಾನ ತಲುಪಿ ಮುಕ್ತಾಯಗೊಂಡಿತು. ಮಳೆಯ ಮಧ್ಯೆಯೇ ಮೆರವಣಿಗೆಯಲ್ಲಿ ಜನರು ಉತ್ಸಾಹದಿಂದಲೇ ಪಾಲ್ಗೊಂಡಿದ್ದು ವಿಶೇಷ. ಈ ಮೂಲಕ ಕಳೆದ 9 ದಿನಗಳಿಂದ ಜರುಗಿದ 20 ನೇ ವರ್ಷದ ಜಂಬೂಸವಾರಿ ಉತ್ಸವ ತೆರೆಕಂಡಿತು.

ಬಂಡೆಮ್ಮದೇವಿ ಮಂಜುಳಾ ಗಣಪತಿರಾವ್ ಮುಂಜಿ ಅವರಿಂದ ವಿವಿಧ ಪೂಜೆ, ಅಲಂಕಾರ ನಡೆಯಿತು. ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜಯೋಗಿಂದ್ರ ಸ್ವಾಮೀಜಿ ಮತ್ತು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಹೆಬ್ಬಳ್ಳಿ ಬ್ರಹ್ಮಚೈತನ್ಯ ಮಠದ ಶ್ರೀ ದತ್ತಾವಧೂತರು ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹಂಡಿಬಡಗನಾಥ ಕಾರ್ಯಭಾರಿ ಯೋಗಿ ಸಾಗರನಾಥ ಮಹಾರಾಜರು, ಹುನಗುಂದಮಠದ ವೀರೇಶ್ವರ ಶಿವಾಚಾರ್ಯರು ಸಮ್ಮುಖವಹಿಸಿದ್ದರು.

ಶಾಸಕರಾದ ಎಂ.ಆರ್.ಪಾಟೀಲ, ಪ್ರಕಾಶ ಕೋಳಿವಾಡ, ಮಾಜಿ ಸಚಿವ ಹನಮಂತಪ್ಪ ಅಲ್ಕೋಡ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಮೇಯರ್‌ ಈರೇಶ ಅಂಚಟಗೇರಿ ಇತರರು ವೇದಿಕೆಯಲ್ಲಿದ್ದರು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಕೋಪರ್ಡೆ, ಪುರುಷೋತ್ತಮ ಪಟೇಲ, ಮಂಜುಗೌಡ ಪಾಟೀಲ, ಪಿ.ಎಚ್. ಕಿರೇಸೂರ, ವಿಲಾಸ ತಿಬೇಲಿ, ರಾಜೇಂದ್ರ ಕಪಲಿ, ಯಶವಂತರಾವ ಕದಂ, ಮನೋಜ ಸಂಗೊಳ್ಳಿ, ಮಂಜುಳಾ ಮುಂಜಿ, ಮಡಿವಾಳಪ್ಪ ಸಿಂಧೋಗಿ ಮತ್ತು ವಿವಿಧ ಟ್ರಸ್ಟ್ ಕಮೀಟಿ, ಮಹಿಳಾ ಮಂಡಳ ಪದಾಧಿಕಾರಿಗಳು ಉತ್ಸವದ ಯಶಸ್ವಿಗೆ ಶ್ರಮಿಸಿದರು.

ಜಂಬೂ ಸವಾರಿಯಿಂದ ಸಾಂಸ್ಕೃತಿಕ ವೈಭವ ಹೆಚ್ಚಳ

ಭಾರತೀಯ ಪರಂಪರೆಯಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಮೆರವಣಿಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಬೇರೆ ಬೇರೆ ರೂಪದಲ್ಲಿ ಅಲಂಕರಿಸಿ ಆರಾಧಿಸುವುದು ಸಂಪ್ರದಾಯ. ಪ್ರತಿ ಆರಾಧನೆಗೂ ಒಂದು ಮಹತ್ವವಿದೆ. ನವರಾತ್ರಿ ನಿಮಿತ್ತದ ಜಂಬೂ ಸವಾರಿಗೆ ಪೌರಾಣಿಕ ಹಿನ್ನೆಲೆಯಿದೆ. ಮೈಸೂರಲ್ಲಿ ನಡೆಯುವ ದಸರಾ ವೈಭವಕ್ಕೆ ಶ್ರೀಮಂತ ಪರಂಪರೆಯಿದೆ. ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಅದೇ ಮಾದರಿಯಲ್ಲಿ ಧಾರವಾಡದಲ್ಲಿಯೂ ದಸರಾ ಜಂಬೂ ಸವಾರಿ ಆಯೋಜಿಸುವ ಮೂಲಕ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಲಾಗಿದೆ ಎಂದರು.