ಪಾಕಿಸ್ಥಾನದ ಭಯೋತ್ಪಾದಕರಿಂದ ಪೈಶಾಚಿಕ ಕೃತ್ಯ; ಶಾಸಕ ರಾಜೇಶ್‌ ನಾಯ್ಕ್‌

| Published : Apr 24 2025, 11:49 PM IST

ಸಾರಾಂಶ

ಪಹಲ್ಗಾಂ ನರಮೇಧದಲ್ಲಿ ಮೃತಪಟ್ಟಿರುವವರ ಕುಟುಂಬಗಳ ಜತೆ ಕೇಂದ್ರ ಸರ್ಕಾರ ನಿಲ್ಲಲಿದ್ದು, ಕಾಶ್ಮೀರದಲ್ಲಿ ಮತ್ತೆ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಾಶ್ಮೀರ ಪಹಲ್ಗಾಮ್‌ನಲ್ಲಿ ಪಾಕಿಸ್ಥಾನದ ಭಯೋತ್ಪಾದಕರು ನಡೆಸಿದ ಪೈಶಾಚಿಕ ಕೃತ್ಯವವನ್ನು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಖಂಡಿಸಿದ್ದಾರೆ.

ಸೊರ್ನಾಡುವಿನಲ್ಲಿ ‘ಕನ್ನಡಪ್ರಭ’ದ ಜೊತೆ ಮಾತನಾಡಿದ ಅವರು, ಆಘಾತಕಾರಿ ಘಟನೆಯಲ್ಲಿ ಅಮಾಯಕ ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಉಗ್ರರು ಈ ಕೃತ್ಯವನ್ನು ಮಾಡುವ ಮೊದಲು ಪ್ರವಾಸಿಗರ ಧರ್ಮವನ್ನು ಕೇಳಿ ಹಿಂದೂಗಳ ಮೇಲೆಯೇ ಗುಂಡು ಹಾರಿಸಿರುವುದು ಕ್ರೌರ್ಯದ ಪರಮಾವಧಿಯಾಗಿದೆ, ಮೃತ ಅಮಾಯಕರಿಗೆ ಆತ್ಮಕ್ಕೆ ಶಾಂತಿ ಬಯಸುವ ಜತೆಗೆ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಅವರು ಹೇಳಿದ್ದಾರೆ.

ಪ್ರವಾಸಿಗರ ಸ್ವರ್ಗ ಎನ್ನುವ ಕಾರಣಕ್ಕೆ ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ತೆರಳುತ್ತಿದ್ದು, ಆದರೆ ಇಂತಹ ನೀಚ ಕೃತ್ಯದ ಮೂಲಕ ಉಗ್ರರು ತಮ್ಮ ರಾಕ್ಷಸೀಕತೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ದಿಟ್ಟ ಕ್ರಮಗಳಿಂದ ಪಾಕಿಸ್ಥಾನದ ಉಗ್ರಗಾಮಿಗಳು ಹತಾಶರಾಗಿರುವುದು ಈ ದಾಳಿಯ ಮೂಲಕ ಸ್ಪಷ್ಟಗೊಂಡಿದ್ದು, ಕೇಂದ್ರ ಸರಕಾರವು ಉಗ್ರರ ಈ ನೀಚ ಕೃತ್ಯಕ್ಕೂ ತಕ್ಕ ಉತ್ತರವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟಿರುವವರ ಕುಟುಂಬಗಳ ಜತೆ ಕೇಂದ್ರ ಸರ್ಕಾರ ನಿಲ್ಲಲಿದ್ದು, ಕಾಶ್ಮೀರದಲ್ಲಿ ಮತ್ತೆ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.