ಸ್ಪೀಕರ್‌ ಮುಖಭಂಗಕ್ಕೆ ಮೊದಲು ಅಮಾನತು ರದ್ದುಗೊಳಿಸಲಿ: ಯಶ್ಪಾಲ್‌ ಆಗ್ರಹ

| Published : Apr 24 2025, 11:49 PM IST

ಸ್ಪೀಕರ್‌ ಮುಖಭಂಗಕ್ಕೆ ಮೊದಲು ಅಮಾನತು ರದ್ದುಗೊಳಿಸಲಿ: ಯಶ್ಪಾಲ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾಧ್ಯಕ್ಷ ಅದರಲ್ಲೂ ನಮ್ಮ ಕರಾವಳಿಯವರೇ ಆಗಿರುವ ಜನಪ್ರತಿನಿಧಿಗೆ ಮುಖಭಂಗವಾಗುವುದು ಸರಿಯಲ್ಲ, ಆದ್ದರಿಂದ ಅವರು ತಮ್ಮ ಅಮಾನತು ಆದೇಶದ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ಅಮಾನತುಗೊಂಡಿರುವ ಶಾಸಕರಲ್ಲೊಬ್ಬರಾಗಿರುವ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾದನಸಭೆ ಕಲಾಪಗಳಿಂದ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೋದರೆ ಅವರ ವಿರುದ್ಧ ತೀರ್ಪು ಬರುತ್ತದೆ. ಇದರಿಂದ ವಿಧಾನ ಸಭಾಧ್ಯಕ್ಷರಿಗೆ ಮುಖಭಂಗವಾಗುತ್ತದೆ. ವಿಧಾನಸಭಾಧ್ಯಕ್ಷ ಅದರಲ್ಲೂ ನಮ್ಮ ಕರಾವಳಿಯವರೇ ಆಗಿರುವ ಜನಪ್ರತಿನಿಧಿಗೆ ಮುಖಭಂಗವಾಗುವುದು ಸರಿಯಲ್ಲ, ಆದ್ದರಿಂದ ಅವರು ತಮ್ಮ ಅಮಾನತು ಆದೇಶದ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ಅಮಾನತುಗೊಂಡಿರುವ ಶಾಸಕರಲ್ಲೊಬ್ಬರಾಗಿರುವ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ರಾಜ್ಯ ಸರ್ಕಾರ ವಿಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಜನ ವಿರೋಧಿ, ಹಿಂದು ವಿರೋಧಿ ಬಿಲ್ಲುಗಳನ್ನು ತರಲಾಗಿತ್ತು, ಮುಸ್ಲಿಮರಿಗೆ ನಾಲ್ಕು ಶೇಕಡ ಮೀಸಲಾತಿ ನೀಡಿ ಒಲೈಸಲು ಸರ್ಕಾರ ಮುಂದಾಗಿತ್ತು, ನಾವು ಬಿಜೆಪಿ ಶಾಸಕರು ಹನಿ ಟ್ರ್ಯಾಪ್, ಮುಸ್ಲಿಂ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದೆವು. ಇದಕ್ಕೆ ಸ್ಪೀಕರ್ ಖಾದರ್ ಬಿಜೆಪಿಯ 18 ಶಾಸಕರನ್ನು ವಿವರಣೆ ಕೂಡ ಕೇಳದೆ ಅಮಾನತು ಮಾಡಿದರು. ಅಮಾನತು ಮಾಡಲು ಒಂದು ನಿಯಮ ಚೌಕಟ್ಟು ಇದೆ, ಅದನ್ನು ಮೀರಿ ಜನಪ್ರತಿನಿಧಿಯಾಗಿ ನಮ್ಮ ಹಕ್ಕನ್ನು ಕಸಿದ್ದಿದ್ದಾರೆ ಎಂದು ಯಶ್‌ಪಾಲ್ ಆರೋಪಿಸಿದ್ದಾರೆ.

ಈ ಹಿಂದೆ ಧರ್ಮೇಗೌಡರು ವಿಧಾನ ಪರಿಷತ್ ಸಭಾಪತಿಯಾಗಿದ್ದರು, ಆಗ ಇದೇ ಕಾಂಗ್ರೆಸ್ ಶಾಸಕರು ಅವರನ್ನು ಗೂಂಡಾಗಳಂತೆ ಎಳೆದಾಡಿದ್ದರು. ರಸ್ತೆ ಜಗಳದ ರೀತಿ ಅವರ ಕುರ್ಚಿಯ ಮುಂದೆ ಅಗೌರವ ತೋರಿದರು, ಹಲ್ಲೆ ಮಾಡುವ ರೀತಿ ವರ್ತಿಸಿದ್ದರು, ಆಗ ಆಗ ಕಾಂಗ್ರೆಸ್ಸಿಗರು ಮೌನಕ್ಕೆ ಶರಣಾಗಿದ್ದರು, ಈಗ ಹೈಕಮಾಂಡ್ ಓಲೈಕೆ ಮಾಡಲು ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ವಿಪಕ್ಷ ನಾಯಕರು ಸ್ಪೀಕರ್ ಅವರನ್ನು ಭೇಟಿಯಾಗಿದ್ದಾರೆ, ಅವರು ಕಾನೂನು ಸಚಿವರ ಬಳಿ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದ್ದಾರೆ. ಅವರು ಅಮಾನತು ಮಾಡುವ ಮುಂಚೆ ಪರವಿರೋಧ ಸಾಧ್ಯತೆ ಬಾಧ್ಯತೆ ಚರ್ಚಿಸಬೇಕಿತ್ತು. ಕಾನೂನು ಸಲಹೆ ಪಡೆಯಬೇಕಾಗಿತ್ತು. ನಾವೀಗ ನ್ಯಾಯಲಯದ ಮೊರೆ ಹೋದರೆ ಅವರಿಗೆ ಮುಖಭಂಗವಾಗುತ್ತದೆ, ಹಾಗಾಗಬಾರದು, ಮುಂದಿನ ಅಧಿವೇಶನದಲ್ಲಿ ಈ ಆದೇಶ ವಾಪಸ್ ಪಡೆಯಲಿ ಎಂದು ಯಶ್‌ಪಾಲ್ ಹೇಳಿದ್ದಾರೆ.