ಸಾರಾಂಶ
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು. ದಿನದ ಅಂಗವಾಗಿ ಶಾಲೆಯ ಕೊಠಡಿಯನ್ನು ಕೃತಕವಾಗಿ ಬಾಹ್ಯಾಕಾಶಯಾನದ ಅಂತರಿಕ್ಷ ಮಾದರಿಯಲ್ಲಿ ನಿರ್ಮಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು. ದಿನದ ಅಂಗವಾಗಿ ಶಾಲೆಯ ಕೊಠಡಿಯನ್ನು ಕೃತಕವಾಗಿ ಬಾಹ್ಯಾಕಾಶಯಾನದ ಅಂತರಿಕ್ಷ ಮಾದರಿಯಲ್ಲಿ ನಿರ್ಮಿಸಲಾಗಿತ್ತು.ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಮಾರ್ಗದರ್ಶನದಂತೆ ಶಾಲಾ ಕೊಠಡಿಯನ್ನು ದೊಡ್ಡದಾದ ಕಪ್ಪು ಬಣ್ಣದ ಟಾರ್ಪಲ್ ಬಳಸಿ ಮತ್ತು ಬಣ್ಣಬಣ್ಣದ ಲೈಟ್‍ಗಳನ್ನು ಬಳಸಿಕೊಂಡು ಕೃತಕ ಬಾಹ್ಯಾಕಾಶ ನಿರ್ಮಾಣ ಮಾಡಲಾಗಿತು. ಈ ಕೃತಕ ಸೌರಮಂಡಲದಲ್ಲಿ ರಂಗುರಂಗಿನ ಸೂರ್ಯ ಚಂದ್ರ, ನಕ್ಷತ್ರ, ಉಪಗ್ರಹ, ಧೂಮಕೇತು, ಉಲ್ಕೆಗಳನ್ನು ಕೃತಕವಾಗಿ ಸೃಷ್ಟಿಸಿದ್ದದ್ದು ಬಾಹ್ಯಾಕಾಶದ ಚಿತ್ರಣ ಕಟ್ಟಿಕೊಟ್ಟಿತು.
ಶುಕ್ರವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳು ಮೊದಲೆ ಸಿದ್ಧಗೊಳಿಸಿದ ಬಾಹ್ಯಾಕಾಶಯಾನ ಮಾಡಲು ಯಾನಕ್ಕೆ ಒಂದೊಂದೆ ಮೆಟ್ಟಿಲೇರಿ ವೀಕ್ಷಿಸಿದರು.ಚಂದ್ರಯಾನ ಯಶಸ್ವಿಯಾದ ವಿಡಿಯೋ ತುಣುಕುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಬಗ್ಗೆ ಶಾಲೆಯ ಸಹ ಶಿಕ್ಷಕರಾದ ಜಾನ್ ಪಾವ್ಲ್ ಡಿಸೋಜ, ಶೀಲಾ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಗಗನಯಾತ್ರಿ ಕಲ್ಪನ ಚಾವ್ಲಾ, ಸುನಿನಾ ವಿಲಿಯಂ ಮತ್ತಿತರ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಬಾಹ್ಯಾಕಾಶ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ನಡೆಸುವ ಮೂಲಕ ಭಿನ್ನವಾಗಿ ದಿನಾಚರಣೆ ನಡೆಯಿತು.